ಕರ್ನಾಟಕ

karnataka

ETV Bharat / state

ತಾಳಿಕೋಟೆಯ ಖಾಸ್ಗತೇಶ್ವರ ಮಠದ ಅದ್ಧೂರಿ ರಥೋತ್ಸವ.. ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು - ಈಟಿವಿ ಭಾರತ್ ಕನ್ನಡ ಸುದ್ದಿ

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಈ ಬಾರಿ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆ ಅದ್ಧೂರಿಯಾಗಿ ನಡೆದಿದೆ.

ತಾಳಿಕೋಟೆಯಲ್ಲಿ ಅದ್ದೂರಿ ರಥೋತ್ಸವ
ತಾಳಿಕೋಟೆಯಲ್ಲಿ ಅದ್ದೂರಿ ರಥೋತ್ಸವ

By

Published : Jul 2, 2023, 3:50 PM IST

ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು

ವಿಜಯಪುರ:ಜಿಲ್ಲೆಯ ಐತಿಹಾಸಿಕ ನಗರಿ ತಾಳಿಕೋಟೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆ ವಿಜೃಂಭಣೆಯಿಂದ ಜರುಗಿತು. ರಾಜ್ಯ, ಹೊರರಾಜ್ಯ ಸೇರಿದಂತೆ ಲಕ್ಷಾಂತರ ಭಕ್ತರನ್ನ ಹೊಂದಿರುವ ಈ ಖಾಸ್ಗತೇಶ್ವರ ಮಠದ ಜಾತ್ರೆ ಇಲ್ಲಿನ ವಿರಕ್ತ ಮಹಾಸ್ವಾಮಿಗಳ ಆಶೀರ್ವಾದದಿಂದ ಶ್ರೀ ಸಿದ್ದಲಿಂಗ ದೇವರು ಇವರ ಅಧ್ಯಕ್ಷತೆಯಲ್ಲಿ ಜಾತ್ರೆಯನ್ನ ಮಠದ ಭಕ್ತರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ಜಾತ್ರೆಯ ಅಂಗವಾಗಿ ಕಳೆದೊಂದು ವಾರದಿಂದ ಮಠದ ಅಂಗಳದಲ್ಲಿ ಮತ್ತು ತಾಳಿಕೋಟೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಕಳೆದ ತಿಂಗಳ ಜೂನ್‌ 23 ರಿಂದ ಸಪ್ತ ಭಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಬಾರಿ ವಿಶೇಷವಾಗಿ ಭಕ್ತರಿಗಾಗಿ ಹೋಳಿಗೆ ಮಹಾಪ್ರಸಾದವನ್ನ ಹಮ್ಮಿಕೊಳ್ಳಲಾಗಿತ್ತು. ಮಠವನ್ನ ಮತ್ತು ಮಠದ ಮುಖ್ಯ ರಸ್ತೆಗಳನ್ನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಹರಿಯಾಣಾದ ಭಕ್ತರಾದ ಕುಮಾರಿ ನೈಯಿಷಾ ಬಯಾನಾ ಅವರು ಜಾತ್ರೆಯ ಕುರಿತು ಪ್ರತಿಕ್ರಿಯಿಸಿದ್ದಾರೆ

ಮಠದ ಹೊರ ಹಾಗೂ ಒಳ ಆವರಣವನ್ನ ತರಹೇವಾರಿ ಹೂಗಳಿಂದ ಅಲಂಕರಿಸಲಾಗಿತ್ತು. ಪ್ರಸಿದ್ಧ ಮೊಸರು ಗಡಿಗೆ ಒಡೆಯುವ ಗೋಪಾಳ ಕಾವಲಿ ಮೊನ್ನೆ ಬೆಳಗಿನ ಜಾವ ಸಂಪ್ರದಾಯದಂತೆ ನಡೆದಿತ್ತು. ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಆಷಾಢ ಶುದ್ಧ ಏಕಾದಶಿ ನಿಮಿತ್ತ ನಡೆದ ಗೋಪಾಳ ಕಾವಲಿ ಉತ್ಸವ ಭಕ್ತರ ಕಣ್ಮನ ಸೆಳೆಯಿತು. ಯುವಕರ ಗುಂಪುಗಳು ಜೀವದ ಹಂಗು ತೊರೆದು ಮಾನವ ಗೋಪುರ ನಿರ್ಮಿಸಿ ಎತ್ತರದಲ್ಲಿ ಕಟ್ಟಿದ ಮೊಸರು ಗಡಿಗೆ ಮುಟ್ಟಲು ಪೈಪೋಟಿ ನಡೆಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

ನವದೆಹಲಿಯಿಂದ ಆಗಮಿಸಿದ್ದ ಭಕ್ತರಾದ ರಾಜೇಶ ಮಹಾಜನ್‌ ಅವರು ಮಾತನಾಡಿದ್ದಾರೆ

ಏಕಾದಶಿ ರಾತ್ರಿ ಊರು ಪ್ರದಕ್ಷಿಣೆ: ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರ, ಖಾಸ್ಗತ ಖಾಸ್ಗತ ಎಂಬ ಘೋಷಣೆ ಮಧ್ಯೆ ಇಂದು ಶುಕ್ರವಾರ ಬೆಳಗಿನ ಜಾವ 6 ಗಂಟೆಗೆ ಸಿದ್ಧಲಿಂಗ ದೇವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಗಡಿಗೆ ಒಡೆಯುವ ಮೂಲಕ ಆಚರಣೆಗೆ ಕಳೆ ತಂದರು. ಹೊಸದೊಂದು ಗಡಿಗೆಯನ್ನು ವಿಭೂತಿ ಕುಂಕಮಗಳಿಂದ ಶುದ್ಧೀಕರಿಸಿ ಅದರಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣಿನ ರಸ, ಅವಲಕ್ಕಿ ಹಾಕಿ ಎತ್ತರಕ್ಕೆ ಕಟ್ಟಲಾಗುತ್ತದೆ. ಒಂದು ವಾರದಿಂದ ಭಜನೆ ನಡೆಸಿದ್ದ ಜಂಗಮ ಮೂರ್ತಿಗಳು ಆಷಾಢ ಶುದ್ಧ ಏಕಾದಶಿ ರಾತ್ರಿ ಊರು ಪ್ರದಕ್ಷಿಣೆ ಆರಂಭಿಸುತ್ತಾರೆ.

ಚರ್ಮ ರೋಗಗಳು ನಿವಾರಣೆ:ಬೆಳಗಿನ ಜಾವ 6ಕ್ಕೆ ಮಠ ತಲುಪಿ, ಏಣಿ ಏರಿ ಮೊಸರು ಗಡಿಗೆಯನ್ನು ಒಂದೆರಡು ಬಾರಿ ತೂಗಾಡಿಸಿ ಬೆತ್ತದಿಂದ ಒಡೆಯಲಾಗುತ್ತದೆ. ನೆರೆದ ಭಕ್ತರ ಮೇಲೆ ಮೊಸರು ಚೆಲ್ಲುತ್ತದೆ. ಮೈಮೇಲೆ ಮೊಸರು ಚೆಲ್ಲಿದರೆ ವರ್ಷವಿಡೀ ಸುಖ ಶಾಂತಿ ದೊರೆಯುತ್ತದೆ. ಅಷ್ಟೇ ಅಲ್ಲ ಚರ್ಮ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರದು. ಭಕ್ತರು ಹರಸಾಹಸ ಮಾಡಿ ಒಡೆದ ಗಡಿಗೆ ಚೂರು ತೆಗೆದುಕೊಂಡು ಹೋಗಿ ದೇವರ ಜಗಲಿ ಮೇಲೆ ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ.

ತಾಳಿಕೋಟೆಯ ಜಾತ್ರೆಯ ಬಗ್ಗೆ ಅನೀಲ್ ವಿಠ್ಠಲ್ ಮಹೀಂದ್ರಕರ್ ಅವರು ಮಾತನಾಡಿದ್ದಾರೆ

ಗೋಪಾಳ ಕಾವಲಿ ಭಾವೈಕ್ಯದ ಪ್ರತೀಕ: ಹಿಂದಿನ ದಿನ ರಾತ್ರಿ 11ಕ್ಕೆ ಹೆಣ್ಣು, ಗಂಡು, ಚಿಕ್ಕ ಮಕ್ಕಳು, ವಿಕಲಚೇತನರು ತಣ್ಣೀರು ಸ್ನಾನ ಮಾಡಿ ಅಂದಾಜು 1ಕಿ.ಮೀ ದೂರದಿಂದ ಮಠದವರೆಗೂ ದೀಡ ನಮಸ್ಕಾರ ಹಾಕಿ ಗೋಪಾಳ ಕಾವಲಿಯಲ್ಲಿ ಭಾಗವಹಿಸುತ್ತಾರೆ. ಮಠದಲ್ಲಿ ನಡೆಯುವ ಗೋಪಾಳ ಕಾವಲಿ ಭಾವೈಕ್ಯದ ಪ್ರತೀಕ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಜಾತಿ ಭೇದವಿಲ್ಲದೆ ಪಾಲ್ಗೊಳ್ಳುತ್ತಾರೆ. ಅಲ್ಲದೇ ಭಕ್ತರಿಗಾಗಿ ಜಾತ್ರಾ ಸಂದರ್ಭದಲ್ಲಿ ಮಹಾಪ್ರಸಾದ ಸಹ ಏರ್ಪಡಿಸಲಾಗಿರುತ್ತದೆ.

ಹೊರರಾಜ್ಯದಿಂದ ಬಂದಂತಹ ಭಕ್ತರು:ಶ್ರೀ ಖಾಸ್ಗತ ಮಹಾಶಿವ ಯೋಗಿಗಳ ಜಾತ್ರೋತ್ಸವ ನಿಮಿತ್ತ ಶನಿವಾರದಂದು ಜರುಗಿದ ಗಂಗಸ್ಥಳ ಪೂಜೆ, ಖಾಸ್ಗತರ ಬೆಳ್ಳಿ ಮೂರ್ತಿಯ ಮತ್ತು ಶ್ರೀಗಳ ಆನೆ ಅಂಬಾರಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ತಾಳಿಕೋಟೆ ಪಟ್ಟಣದ ಎಲ್ಲಾ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಮೆರವಣಿಗೆಯುದ್ದಕ್ಕೂ ಪುಷ್ಪನಮನ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಸಹ ಪಾಲ್ಗೊಂಡು ಮೆರಗು ತಂದವು. ಜಾತ್ರೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯ ಹೊರರಾಜ್ಯದಿಂದ ಬಂದಂತಹ ಭಕ್ತರು ಪಾಲ್ಗೊಂಡಿದ್ದರು.

ನಿನ್ನೆ ಶನಿವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಆನೆ ಅಂಬಾರಿಯ ಮೆರವಣಿಗೆ ಹಾಗೂ ರಥೋತ್ಸವದುದ್ದಕ್ಕೂ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಸಹ ಕಲ್ಪಿಸಲಾಗಿತ್ತು.

ಇದನ್ನೂ ಓದಿ:ಅದ್ಧೂರಿಯಾಗಿ ನೆರವೇರಿದ ದಾವಣಗೆಯ ಶ್ರೀ ದುರ್ಗಾಂಬಿಕಾ ಎಡೆ ಜಾತ್ರೆ: ಮಳೆಗಾಗಿ ವಿಶೇಷ ಪ್ರಾರ್ಥನೆ

ABOUT THE AUTHOR

...view details