ವಿಜಯಪುರ: ಕಲಿಕೆಗೆ ವಯಸ್ಸಿನ ಮಿತಿ ಇರದು. ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕೆಯ ಆಸಕ್ತಿಗೆ ಅಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ (ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ) ಪರೀಕ್ಷೆಯಲ್ಲಿ ಎಂ.ಎ. ಇಂಗ್ಲೀಷ್ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಗಮನ ಸೆಳೆದಿದ್ದಾರೆ. ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಇದಾಗಿದ್ದು, ಅವರಲ್ಲಿ ಓದಿನ ಬಗ್ಗೆ ಇರುವ ಹಂಬಲ ಮತ್ತು ಇಚ್ಛಾಶಕ್ತಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರಿಗೆ ಮಾದರಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಕ್ಕಳು ಹಾಗೂ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ, ಇವರ ವಿದ್ಯಾರ್ಜನೆಗೆ ಇವು ಯಾವುದೂ ಅಡ್ಡಿಯಾಗಿಲ್ಲ. ಇವರ ಮಗಳು ಕೂಡ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಇವರ ಗಂಡು ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕಾರಿ ನೌಕರಿಯಲ್ಲಿದ್ದ ಇವರು ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ಇಗ್ನೋದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಆದರೂ ಇವರಿಗೆ ಇನ್ನೂ ಓದುವ ಮತ್ತು ಪರೀಕ್ಷೆ ಬರೆಯುವ ಹವ್ಯಾಸ ಮಾತ್ರ ಕಡಿಮೆಯಾಗದಿರುವುದು ಗಮನಾರ್ಹ ಅಂಶ.