ವಿಜಯಪುರ :ಇಂದು ಜಿಲ್ಲೆಯಲ್ಲಿ ನಡೆದ 73ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿಯವರು ತಡಬಡಿಸುತ್ತಲೇ ಭಾಷಣ ಮಾಡಿದ ಪ್ರಸಂಗ ನಡೆಯಿತು.
ನಗರದ ಹೊರವಲಯದ ತೊರವಿ ಮಹಿಳಾ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಜ್ಞಾನ ಶಕ್ತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿಯವರು ಧ್ವಜಾರೋಹಣ ನೆರವೇರಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬಳಿಕ ಸಚಿವರು ಪಥ ಸಂಚಲನ ವೀಕ್ಷಿಸಿದರು.
ನಂತರ ಮಾತನಾಡಿದ ಸಚಿವರು, ಹೆಚ್ಚಿನ ಕೋವಿಡ್ ಕೇಸ್ಗಳು ಜಿಲ್ಲೆಯಲ್ಲಿವೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದೆ. ಕೊರೊನಾ ಲಸಿಕೆ ನೀಡುವ ಕಾರ್ಯ ಉತ್ತಮವಾಗಿ ನಡೆದಿದೆ ಎಂದು ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಪ್ಪು ಮುದ್ರಣ :ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀಡುವ ಸಂದೇಶದ ಭಾಷಣದ ಪ್ರತಿಯ ಪುಸ್ತಕ ಮುದ್ರಣದಲ್ಲಿ ದೋಷ ಕಂಡು ಬಂದಿದೆ. ವಾರ್ತಾ ಇಲಾಖೆ ಮುದ್ರಿಸುವ ಪುಸ್ತಕದ ಮುಖಪುಟದಲ್ಲಿ 2022ರ ಜನವರಿ 26 ಎಂದು ಬರೆಯುವ ಬದಲು 2021ರ ಜನವರಿ 26 ಎಂದಾಗಿತ್ತು.
ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಅಸಮಾಧಾನ ಇಲ್ಲ :ಸಚಿವರು ಸ್ವಕ್ಷೇತ್ರದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡರೆ ಅಲ್ಲಿ ರಾಜಕೀಯ ಬೆರೆತು ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳಬಹುದು ಎಂಬ ಕಾರಣಕ್ಕೆ ಸಿಎಂ ಬೊಮ್ಮಾಯಿಯವರು ಸಚಿವರಿಗೆ ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಇದಕ್ಕೆ ಎಲ್ಲಾ ಸಚಿವರು ಒಪ್ಪಿಕೊಂಡಿದ್ದಾರೆ. ಯಾರಿಗೂ ಅಸಮಾಧಾನವಿಲ್ಲ ಎಂದು ಸ್ಪಷ್ಟನೆ ನೀಡದರು.