ಮುದ್ದೇಬಿಹಾಳ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುದ್ದೇಬಿಹಾಳ ಶೈಕ್ಷಣಿಕ ತಾಲೂಕಿಗೆ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ಸದ್ಯಕ್ಕೆ ಪೂರೈಕೆಯಾಗಿರುವ ಪಠ್ಯಪುಸ್ತಕಗಳ ಪೈಕಿ ಶೇ.70 ರಷ್ಟು ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು, ಜಿಲ್ಲೆಯಲ್ಲಿಯೇ ಪಠ್ಯಪುಸ್ತಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪಿಸಿದ ಕೀರ್ತಿ ಮುದ್ದೇಬಿಹಾಳ ತಾಲೂಕಿಗೆ ಸಲ್ಲುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಠ್ಯಪುಸ್ತಕ ಪೂರೈಕೆ ಕುರಿತು ಮಾಹಿತಿ ನೀಡಿದ ವಿಜಯಲಕ್ಷ್ಮಿ ಚಿಲ್ಲಾಳಶೆಟ್ಟರ್ ಪಠ್ಯಪುಸ್ತಕದ ಅಂಕಿ - ಅಂಶಗಳು :
ಮುದ್ದೇಬಿಹಾಳ ಶೈಕ್ಷಣಿಕ ತಾಲೂಕಿಗೆ 1 ರಿಂದ 10ನೇ ತರಗತಿಯವರೆಗೆ 2,59,372 ಪಠ್ಯಪುಸ್ತಕಗಳು ಉಚಿತ ವಿತರಣೆಗಾಗಿ ಪೂರೈಕೆಯಾಗಿದ್ದು, ಖಾಸಗಿಯಾಗಿ 31,425 ಪುಸ್ತಕಗಳು ಮಾರಾಟಕ್ಕೆಂದು ಪೂರೈಕೆಯಾಗಿವೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಪೂರೈಕೆಯಾದ ಪುಸ್ತಕಗಳನ್ನು ಖಾಸಗಿ ಶಾಲೆಯವರು ಖರೀದಿಸದೇ ಹಾಗೆ ಬಿಟ್ಟಿದ್ದರಿಂದ ಈ ಬಾರಿ ಮಾರಾಟಕ್ಕೆಂದು ಪೂರೈಸುವ ಪುಸ್ತಕಗಳನ್ನು ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಿಲ್ಲ. ಪೂರೈಕೆಯಾಗಿರುವ ಪುಸ್ತಗಳಲ್ಲಿ 1.86 ಲಕ್ಷ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ ಎಂದು ಪಠ್ಯಪುಸ್ತಕ ಪೂರೈಕೆ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ ಚಿಲ್ಲಾಳಶೆಟ್ಟರ್ ತಿಳಿಸಿದ್ದಾರೆ.
ಯಾವ ತರಗತಿಗೆ ಎಷ್ಟು ವಿಷಯಗಳ ಪುಸ್ತಕ ಲಭ್ಯ:
ಒಂದನೇ ತರಗತಿಯಲ್ಲಿ ಮೂರು, ಎರಡನೇ ತರಗತಿಯಲ್ಲಿ ಎರಡು, ಮೂರನೇ ತರಗತಿಯಲ್ಲಿ ಎರಡು, ನಾಲ್ಕನೇ ತರಗತಿಯಲ್ಲಿ ಎರಡು, ಐದನೇ ತರಗತಿಯಲ್ಲಿ ಮೂರು, ಆರನೇ ತರಗತಿಯಲ್ಲಿ ಐದು, ಏಳನೇ ತರಗತಿಯಲ್ಲಿ ನಾಲ್ಕು, ಎಂಟನೇ ತರಗತಿಯಲ್ಲಿ ಒಂಬತ್ತು, 9ನೇ ತರಗತಿಯಲ್ಲಿ ಎಂಟು ವಿಷಯಗಳ ಪುಸ್ತಕಗಳು ಪೂರೈಕೆ ಆಗಿವೆ. ಹತ್ತನೇ ತರಗತಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಪೂರೈಕೆಯಾಗಿವೆ.
ಉಚಿತ ಪಠ್ಯಪುಸ್ತಕ ಕೊಡಲು ಹಣ ವಸೂಲಿ :
ಆರ್.ಟಿ.ಇ ಅಡಿ ಸೀಟು ಪಡೆದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರವೇ ಆ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕಗಳನ್ನು ಪೂರೈಸುತ್ತಿದೆ. ಆದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಆರ್.ಟಿ.ಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳಿಗೂ ಸರ್ಕಾರ ಕೊಟ್ಟಿರುವ ಪುಸ್ತಕಗಳನ್ನು ಕೊಡಲು ಹಣ ಪಡೆದುಕೊಂಡಿರುವ ಕುರಿತಾದ ದೂರುಗಳು ಪಾಲಕರಿಂದ ಕೇಳಿ ಬಂದಿವೆ.
ಮುಂದಿನ ದಿನಗಳಲ್ಲಿ ಆರ್.ಟಿ.ಇ ಸೀಟು ಪಡೆದು ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಪೂರೈಸುವ ಪಠ್ಯಪುಸ್ತಕಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಪಾಲಕರು ತಿಳಿಸಿದ್ದಾರೆ.