ವಿಜಯಪುರ: ಭೀಮಾತೀರ ಮತ್ತೊಮ್ಮೆ ಸುದ್ದಿಯಲ್ಲಿದೆ. ವ್ಯಾಪಾರಿಯೊಬ್ಬನಿಗೆ ಬೆದರಿಕೆ ಹಾಕಿ ಹಣದ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಹಾದೇವ ಸಾಹುಕಾರ ಭೈರಗೊಂಡನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಚಿನ್ನದ ವ್ಯಾಪಾರಿಯೊಬ್ಬನಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ನೀಡಿದ ದೂರಿನಂತೆ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆರೂರ ಗ್ರಾಮದ ಮಹಾದೇವ ಸಾಹುಕಾರ ಭೈರಗೊಂಡ ಜುಲೈ 19ರಂದು ನಿನ್ನ ಜೊತೆ ಮಾತನಾಡುವುದಿದೆ ಎಂದು ಹೇಳಿ ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಅವರನ್ನು ತಮ್ಮ ತೋಟದ ಮನೆಗೆ ಕರೆಸಿಕೊಂಡಿದ್ದಾರೆ.
ಅಂದು ಮಹಾದೇವ ಸಾಹುಕಾರ ಭೈರಗೊಂಡ ಇನ್ನೂ ಇಬ್ಬರು ಆರೋಪಿಗಳಿದ್ದರು. ವ್ಯಾಪಾರಿ ನಾಮದೇವನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಇನ್ನೆರಡು ದಿನಗಳಲ್ಲಿ ನಮಗೆ ಐದು ಕೋಟಿ ರೂ. ಹಣ ಅಥವಾ 3 ಕೆಜಿ ಚಿನ್ನ ತಂದು ಕೊಡಬೇಕು ಇಲ್ಲದಿದ್ರೆ, ಕೈ-ಕಾಲು ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಷಯ ಪೊಲೀಸರಿಗೆ ಅಥವಾ ಇನ್ನಾರಿಗಾದ್ರೂ ತಿಳಿಸಿದ್ರೆ ಮನೆಗೆ ನುಗ್ಗಿ ಗುಂಡಿಟ್ಟು ಹೊಡೆಯುವುದಾಗಿ ಹಾಗೂ ಅಂಗಡಿಗೆ ನುಗ್ಗಿ ಲೂಟಿ ಮಾಡಿಸುವುದಾಗಿ ಬೆದರಿಸಿದ್ದಾರೆ.
ಈ ಸಂಬಂಧ ವ್ಯಾಪಾರಿ ನಾಮದೇವ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಅವರ ಜತೆ ಇದ್ದ ಇನ್ನಿಬ್ಬರ ಮೇಲೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಜುಲೈ 22ರಂದು ಮಹಾದೇವ ಸಾಹುಕಾರ ಅವರ ಜನ್ಮದಿನದಂದು ಆಗಿನ ಸಿಪಿಐ ಎಂ ಬಿ ಅಸೂಡೆ ಹಾಗೂ ಪಿಎಸ್‍ಐ ಗೋಪಾಲ ಹಳ್ಳೂರ ಪಾಲ್ಗೊಂಡು ಕೇಕ್ ಕತ್ತರಿಸಿ ಸುದ್ದಿಯಾಗಿದ್ದರು.
ಈ ವರ್ಷ ಭೈರಗೊಂಡ ಜನ್ಮದಿನದಂದು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾದೇವ ಸಾಹುಕಾರನನ್ನು ಪೊಲೀಸರು ಬಂಧಿಸಿದ್ದು ಮತ್ತೊಮ್ಮೆ ಭೀಮಾ ತೀರದಲ್ಲಿ ಸಂಚಲನ ಮೂಡಿಸಿದೆ. ಹಣ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾದೇವ ಸಾಹುಕಾರ ಭೈರಗೊಂಡನನ್ನು ಬಂಧಿಸಿರುವ ಪೊಲೀಸರು, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.