ವಿಜಯಪುರ:"ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕೊರೊನಾ ವೇಳೆ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಒಬೊಬ್ಬ ರೋಗಿಗಳಿಗೆ 8ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆಗ ನಮ್ಮ ಸರ್ಕಾರವಿದ್ದರೇನು?, ಕಳ್ಳರು ಕಳ್ಳರೇ ಅಲ್ಲವಾ?, ನನಗೂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಗ 5.80 ಲಕ್ಷ ರೂ. ಬಿಲ್ ಮಾಡಿದ್ದರು'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನಗೆ ನೋಟಿಸ್ ಕೊಡಲಿ. ಪಕ್ಷದಿಂದ ಹೊರ ಹಾಕಲು ನೋಡಲಿ. ನಾನು ಇವರೆಲ್ಲರ ಬಣ್ಣ ಕಳಚುವೆ'' ಎಂದು ಕಿಡಿಕಾರಿದರು.
''ನನ್ನ ಕೈಯಲ್ಲಿ ರಾಜ್ಯ ಕೊಟ್ಟರೆ ಮಾದರಿ ಕರ್ನಾಟಕವನ್ನಾಗಿ ಮಾಡುತ್ತೇನೆ. ಹಣ ತಿನ್ನುವ ಚಟ ನನಗಿಲ್ಲ. ಲೂಟಿ ಮಾಡಬೇಕೆಂಬುದಿಲ್ಲ. ನಾವು ರೈತರ ಮಕ್ಕಳೆಂದು ಇವರೆಲ್ಲರೂ ಭಾಷಣ ಹೊಡೆಯುತ್ತಾರೆ. ಮೊದಲ ಕೃಷಿ ಬಜೆಟ್ ಎನ್ನುತ್ತಾರೆ. ಹಾಗಾದರೆ ದುಬೈನಲ್ಲಿ ಆಸ್ತಿ ಮಾಡಿದ್ದೇಕೆ?. ನೀವು ರೈತನ ಮಕ್ಕಳಾಗಿ ಅಮೆರಿಕದಲ್ಲಿ ಮನೆ ಯಾಕೆ ತೆಗೆದುಕೊಂಡಿದ್ದು?, ಯಾರ್ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುವೆ'' ಎಂದರು.
''ಜನವರಿ 5ರಂದು ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಲಿದೆ. ನಂತರ ಎರಡನೆಯದ್ದು 'ಅಪ್ಪಾಜಿ'ಯವರದ್ದೇ ಇದೆ. ಕೊರೊನಾ ವೇಳೆ 45 ರೂ. ಇದ್ದ ಮಾಸ್ಕ್ಗೆ ಸರ್ಕಾರದಲ್ಲಿ ಎಷ್ಟು ಖರ್ಚು ಹಾಕಿದ್ದಾರೆ ಎಂಬುದು ಗೊತ್ತಿದೆ. ಒಂದು ಮಾಸ್ಕ್ಗೆ 485 ರೂ. ಬಿಲ್ ಹಾಕಿದ್ದಾರೆ. ಬೆಂಗಳೂರಲ್ಲಿ 10 ಸಾವಿರ ಬೆಡ್ ಮಾಡಿದ್ದಾಗಿ ಹೇಳಿದ್ದರು. ಆ 10 ಸಾವಿರ ಬೆಡ್ಗಳನ್ನು ಬಾಡಿಗೆ ಪಡೆದಿದ್ದರು. ಈ ಬಾಡಿಗೆ ಹಣದಲ್ಲಿ ಬೆಡ್ಗಳನ್ನು ಖರೀದಿ ಮಾಡಿದ್ದರೆ, ಎರಡೆರಡು ಬೆಡ್ಗಳು ಬರುತ್ತಿದ್ದವು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ?, ಕೊರೊನಾ ವೇಳೆಯೇ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ'' ಎಂದು ಯತ್ನಾಳ್ ಆರೋಪಿಸಿದರು.
''ಕೊರೊನಾ ವೇಳೆ ಒಬೊಬ್ಬ ರೋಗಿಗಳಿಗೆ 8ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ. ನನಗೆ 5.80 ಲಕ್ಷ ರೂ. ತೆಗೆದುಕೊಂಡಿದ್ದರು. ಇಷ್ಟೊಂದು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕು ಎಂದು ವಿಧಾನಸೌಧದಲ್ಲಿ ಮಾತನಾಡಿದ್ದೆ. ಇದುವರೆಗೆ ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂ. ಸಂಬಳವಿದೆ, ನಾನು ಕಮಿಟಿ ಮೀಟಿಂಗಿಗೆ ಹೋಗಿ ಬಂದರೆ, 65 ಸಾವಿರ ರೂ. ಸಿಗುತ್ತದೆ. ಇದನ್ನು ತೆಗೆದುಕೊಂಡರೆ ನಾವು ಮನುಷ್ಯರಾ?. ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ'' ಎಂದು ತಿಳಿಸಿದರು.
ಮೋದಿಗಾಗಿ ನನ್ನ ಕೆಲಸ:ಮುಂದುವರೆದು ಮಾತನಾಡಿದ ಯತ್ನಾಳ್, ''ಎಲ್ಲರೂ ಕಳ್ಳರಾದರೆ ರಾಜ್ಯ ಮತ್ತು ದೇಶವನ್ನು ಯಾರು ಉಳಿಸುತ್ತಾರೆ?. ಪ್ರಧಾನಿ ಮೋದಿ ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ. ಕಲ್ಲಿದ್ದಲು ಹಗರಣ, 2ಜಿ ಹಗರಣಗಳನ್ನು ಕೇಳಿದ್ದೇವೆ. ಮೋದಿ ಕಾಲದಲ್ಲಿ ಒಂದಾದರೂ ಹಗರಣ ನೋಡಿದ್ದೀರಾ?, ಮೋದಿ ಬಗ್ಗೆ ಕೇವಲ ಟೀಕೆ ಮಾಡುತ್ತಾರೆ. ಆದರೆ, ಮೋದಿಯವರು ಭ್ರಷ್ಟಾಚಾರದಲ್ಲಿ ಇದ್ದಾರೆ ಎಂಬ ಹೇಳುವ ತಾಕತ್ತು ದೇಶದಲ್ಲಿ ಯಾರಿಗಾದರೂ ಇದೆಯಾ?. ಅವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾರಿಗೂ ಅಲ್ಲ ಎಂದರು.