ಮುದ್ದೇಬಿಹಾಳ: ರಾಜ್ಯ ಹೆದ್ದಾರಿ ಯೋಜನಾ (ಎಸ್.ಎಚ್.ಡಿ.ಪಿ) ಅಡಿಯಲ್ಲಿ ಮತಕ್ಷೇತ್ರಕ್ಕೆ 32 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾಹಿತಿ ನೀಡಿದ್ದಾರೆ.
ರಸ್ತೆ ಸುಧಾರಣೆಗೆ ಸರ್ಕಾರದಿಂದ 32 ಕೋಟಿ ರೂ.ಅನುದಾನ: ಶಾಸಕ ನಡಹಳ್ಳಿ
ಮುದ್ದೇಬಿಹಾಳ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗ್ರಾಮ ಪಂಚಾಯಿತಿ ಚುನಾವಣೆ ನಂತರ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿಳಿಸಿದರು.
ಹದಗೆಟ್ಟ ರಸ್ತೆಗಳನ್ನು ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹಿರೇಮುರಾಳ ಹಾಗೂ ಬಸರಕೋಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಎರಡು ಪ್ರಮುಖ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ಅನುದಾನ ದೊರಕಿದೆ. ಗ್ರಾ.ಪಂ.ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಟೆಂಡರ್ ಕರೆದು ರಸ್ತೆಗಳ ಸುಧಾರಣೆಗೆ ಚಾಲನೆ ನೀಡಲಾಗುವುದು ಎಂದರು.
ಕವಡಿಮಟ್ಟಿ ಗ್ರಾಮದಿಂದ ಜಲಪೂರ,ಅಡವಿ ಹುಲಗಬಾಳ,ಅಡವಿ ಸೋಮನಾಳ ಮೂಲಕ ಡೊಂಕಮಡು ಗ್ರಾಮ ಸಂಪರ್ಕಿಸುವ 19.60 ಕಿ.ಮೀ ರಸ್ತೆ ನಿರ್ಮಾಣಕ್ಕೆ 22 ಕೋಟಿ ರೂ. ಹಾಗೂ ಬಸರಕೋಡದಿಂದ ರೂಢಗಿ ಗ್ರಾಮದ 6.50 ಕಿ.ಮೀ ರಸ್ತೆಯ ನಿರ್ಮಾಣಕ್ಕೆ ಸರ್ಕಾರದಿಂದ 10 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ.