ವಿಜಯಪುರ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಮತ್ತೆ 2.20 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರ ಪರಿಣಾಮ ಆಲಮಟ್ಟಿ ಜಲಾಶಯದಿಂದ ಶನಿವಾರ ಸಂಜೆ ಎಲ್ಲ 26 ಗೇಟ್ ಮೂಲಕ 3.50ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಮಾಹಿತಿ ನೀಡಿದ್ದಾರೆ.
ಇದರ ಪರಿಣಾಮ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ, ಗಂಗೂರ, ದೇವೂರ, ನಾಗರಾಳ, ಕಾಳಗಿ ಮತ್ತು ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು, ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರ ಹಾಗೂ ಜಾನುವಾರುಗಳಿಗೆ ಗೋ ಶಾಲೆ ತೆರೆಯಲು ಸ್ಥಳ ಗುರುತಿಸಲಾಗಿದೆ. ಇದರ ಜತೆ ಕೃಷ್ಣಾ ನದಿ ಪಾತ್ರ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ನದಿ ಕಡೆ ಹೋಗದಂತೆ ಡಂಗೂರು ಮೂಲಕ ಎಚ್ಚರಿಕೆ ನೀಡಲಾಗಿದೆ.