ವಿಜಯಪುರ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನಿಸಲಾಗುವುದು. ನೀಡದಿದ್ದಲ್ಲಿ ಇಂದಿನಿಂದ ಆರಂಭವಾಗಿರುವ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪಂಚಮಸಾಲಿ ಸಮಾಜದ ನಾಯಕಿ ವಿದ್ಯಾರಾಣಿ ತುಂಗಳ ಎಚ್ಚರಿಸಿದರು.
ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟ ಕೊನೆ ಹಂತಕ್ಕೆ ತಲುಪಿದೆ. ಡಿ 22ರಂದು ಬೆಳಗಾವಿ ಸುವರ್ಣಸೌಧ ಎದುರು ಸಮಾಜದ ಮುಖಂಡರು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಜಿಲ್ಲೆಯ 2 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಲಿದ್ದೇವೆ. ಡಿ.21ರಂದು ರಾತ್ರಿ ಆಯಾ ಕ್ಷೇತ್ರದಿಂದ ವಾಹನಗಳು ಹೊರಡಲಿವೆ ಎಂದು ಮಾಹಿತಿ ನೀಡಿದರು.
2ಎ ಮೀಸಲಾತಿಗಾಗಿ ಕಳೆದ 2 ವರ್ಷಗಳಿಂದ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಸಿಎಂ ಬೊಮ್ಮಾಯಿ ಪ್ರತಿ ಬಾರಿ ಭರವಸೆ ನೀಡಿ ಹೋರಾಟಕ್ಕೆ ಬ್ರೇಕ್ ಹಾಕುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ಮಾತ್ರ ನಮ್ಮ ಹೋರಾಟ ಅಚಲವಾಗಿದೆ. ಮೀಸಲಾತಿ ನೀಡಿ ಇಲ್ಲವಾದರೆ, ನಮ್ಮ ಹೋರಾಟ ಎದುರಿಸಿ ಎಂಬ ವೇದಘೋಷ ಮೊಳಗಲಿದೆ ಎಂದು ಎಚ್ಚರಿಸಿದರು.
ವಿಜಯಪುರ ಜಿಲ್ಲಾ ಪಂಚಮಸಾಲಿ ಸಮುದಾಯ ಹಾಗೂ ಚನ್ನಮ್ಮ ಬಳಗದ ಜಂಟಿ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ. ನಾವು ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಬೇಡಿ ಎಂದು ಹೇಳಿಲ್ಲ. ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿ, ಜಿಲ್ಲೆಯಲ್ಲಿ ನಮ್ಮ ಸಮುದಾಯ 1 ಕೋಟಿಗೂ ಹೆಚ್ಚು ಜನರಿದ್ದಾರೆ. ನಮ್ಮಲ್ಲಿಯೂ ಕಡುಬಡವರಿದ್ದಾರೆ. ಅವರ ಮುಂದಿನ ಶಿಕ್ಷಣ, ಭವಿಷ್ಯದ ದೃಷ್ಟಿಯಿಂದ ಈ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ಓದಿ:ನಾಳೆ ಸಭಾಪತಿ ಸ್ಥಾನಕ್ಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ