ವಿಜಯಪುರ:28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಿತು. ವಿಜಯಪುರ– ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಾಲ್ಕು ದಿನ ಕಾಲ ನೆರವೇರಿತು. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ 850 ಸೈಕ್ಲಿಸ್ಟ್‌ಗಳು 150 ತಾಂತ್ರಿಕ ಅಧಿಕಾರಿಗಳು ಈ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಜನವರಿ 9 ರಿಂದ 12 ವರೆಗೆ ನಾಲ್ಕು ದಿನಗಳ ಕಾಲ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಎಲ್ಲರ ಗಮನ ಸೆಳೆಯಿತು.
ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, "ವಿಜಯಪುರ ಜಿಲ್ಲೆ ಸೈಕ್ಲಿಂಗ್ ಕಾಶಿ ಎಂದು ಹೆಸರುವಾಸಿಯಾಗಿರುವ ಜಿಲ್ಲೆ. 28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ 850 ಸೈಕ್ಲಿಸ್ಟ್‌ಗಳು 150 ತಾಂತ್ರಿಕ ಅಧಿಕಾರಿಗಳು ಬಂದಿದ್ದಾರೆ. ಅದರ ಜೊತೆಗೆ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ 25 ಮಂದಿ ತಾಂತ್ರಿಕ ಅಧಿಕಾರಿಗಳು ಬಂದಿದ್ದಾರೆ. ಇಲ್ಲಿ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಬೇಕು ಎಂದು ರಾಷ್ಟ್ರೀಯ ಸೈಕ್ಲಿಂಗ್ ಫೆಡರೆಷನ್ ಆಫ್ ಇಂಡಿಯಾದ ಅಧ್ಯಕ್ಷ ಪಂಕಜ್ ಸಿಂಗ್ ಹಾಗೂ ಕಾರ್ಯದರ್ಶಿ ಮಣಿಂದರ್ ಪಾಲ್ ಸಿಂಗ್ ಅವರನ್ನು ಕೇಳಿದಾಗ ಒಪ್ಪಿಗೆ ಕೊಟ್ಟರು. ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ವಿಜಯಪುರದಲ್ಲಿ ನಡೆಯುತ್ತಿರುವುದು ಎರಡನೇ ಬಾರಿ ಆಗಿದೆ. ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯೋಜನೆ ಅವಕಾಶ ಮಾಡಿಕೊಟ್ಟ ಎನ್ಹೆಚ್ಐ ಮತ್ತು ವಿಜಯಪುರ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.