ವಿಜಯಪುರ: ಕಳಪೆ ಗುಣಮಟ್ಟದ ರಸಗೊಬ್ಬರ ತಯಾರಿಕಾ ಘಟಕಗಳ ವಿರುದ್ದ ಕ್ರಮ ಕೈಗೊಳ್ಳುವ ಜೊತೆಗೆ ಅವರ ಲೈಸನ್ಸ್ ರದ್ದತಿಗೂ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ 19ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ತೊಂದರೆಯಾಗದಂತೆ ಹಾಗೂ ಅವರಿಗೆ ಯಾವುದೇ ರೀತಿಯ ಮೋಸವಾಗದಂತೆ ನೋಡಿಕೊಳ್ಳಲು ಅವರಿಗೆ ಉತ್ತಮ ರಸಗೊಬ್ಬರ, ಬೀಜ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ತಾಲೂಕಿನ ಕನ್ನಾಳ ಕ್ರಾಸ್ ಹತ್ತಿರ ಒಂದು ಗೊಬ್ಬರ ತಯಾರಿಸುವ ಕಾರ್ಖಾನೆಯಿದ್ದು, ಅಲ್ಲಿ ಮಣ್ಣಿನಿಂದ ಮಾಡಿದ ಕಳಪೆಮಟ್ಟದ ಗೊಬ್ಬರ ತಯಾರಿಸಿ ಗೊಬ್ಬರ ಬೇರೆ ತಾಲೂಕಿನಲ್ಲಿರುವ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿ.ಪಂ.ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಕಳಪೆಮಟ್ಟದ ಗೊಬ್ಬರವನ್ನು ಬಳಸುವುದರಿಂದ ರೈತರ ಬೆಳೆಗಳ ಗುಣಮಟ್ಟ ಕಡಿಮೆಯಾಗುತ್ತದೆ. ಕಳಪೆ ಮಟ್ಟದ ಬೀಜಗಳ ಪೂರೈಕಯಿಂದ ರೈತರು ನಿಗದಿತ ಪ್ರಮಾಣದ ಬೆಳೆಯನ್ನು ಪಡೆಯಲಾಗುತ್ತಿಲ್ಲ. ಆ ಕಾರಣ ಕಳಪೆ ಮಟ್ಟದ ಗೊಬ್ಬರ ಮತ್ತು ಬೀಜಗಳ ಗೋದಾಮುಗಳಿಗೆ ಭೇಟಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಹಿನ್ನೆಲೆಯಲ್ಲಿ ಅಂತಹ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರಿನ ಚಾಲ್ತಿಯಲ್ಲಿರದ ಘಟಕಗಳನ್ನು ಆದಷ್ಟು ಬೇಗ ಚಾಲ್ತಿ ಮಾಡಬೇಕು. ಅಕ್ಷರ ದಾಸೋಹ ಯೋಜನೆಯಡಿ ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ಸಮರ್ಪಕವಾಗಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಓದಿ:ಮಸ್ಕಿ ಉಪಚುನಾವಣೆ: ಇಂದು ಸಿಎಂ ಬಿಎಸ್ವೈರಿಂದ ಭರ್ಜರಿ ಮತಬೇಟೆ