ವಿಜಯಪುರ : ಕೋವಿಡ್-19 ರೋಗಿಗಳ ನಿರ್ವಹಣೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ 14 ದಿನಗಳ ಸಾಂಸ್ಥಿಕ (ಇನ್ಸ್ಟಿಟ್ಯೂಷನಲ್) ಕ್ವಾರಂಟೈನ್ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯಂತೆ, ಕೋವಿಡ್-19 ರೋಗಿಗಳ ನಿರ್ವಹಣೆಯಲ್ಲಿ ತೊಡಗಿರುವ ವೈದ್ಯಾಧಿಕಾರಿಗಳು, ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರು, ಶುಶ್ರೂಷಕಿಯರು, ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್ ಡಿ ನೌಕರರು 14 ದಿನಗಳ ಕ್ವಾರಂಟೈನ್‌ಗೆ ಒಳಪಡುವ ಅವಶ್ಯಕತೆಯಿಲ್ಲ. ಸುರಕ್ಷಾ ಸಲಕರಣೆಗಳೊಂದಿಗೆ ಕಾರ್ಯನಿರ್ವಹಿಸುವ ಹಿನ್ನೆಲೆ ಅಪಾಯ ಕಡಿಮೆ ಇದೆ ಎಂದರು.
ಭಾನುವಾರ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಪಿ-1,122, 35 ವರ್ಷದ ಮಹಿಳೆಗೆ ಪಿ- 577 ರ ಸಂಪರ್ಕದಿಂದ ಸೋಂಕು ತಗುಲಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 54 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಈ ಪೈಕಿ 14 ಪ್ರಕರಣಗಳು ಸಕ್ರಿಯವಿದೆ. 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.
ಇದುವರೆಗೆ ಒಟ್ಟು 10,097 ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಗೋವಾದಿಂದ 2,886 ಜನ ಬಂದಿದ್ದಾರೆ. ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಒಟ್ಟು 2,741 ಜನರ ಸ್ಯಾಂಪಲ್ಸ್ ಸಂಗ್ರಹಿಸಲಾಗಿದ್ದು, ಈ ಪೈಕಿ 2,608 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 80 ಜನರ ವರದಿ ಬರಲು ಬಾಕಿಯಿದೆ. ವಿದೇಶಗಳಿಂದ ಬಂದ 2,292 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 1,269 ಮಂದಿ 28 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 983 ಮಂದಿ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆಂದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣನವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ ಬಿರಾದಾರ, ಡಾ.ಮುಕುಂದ ಗಲಗಲಿ, ಡಾ.ಧಾರವಾಡಕರ ಸೇರಿದಂತೆ ಇತರರು ಇದ್ದರು.