ಕಾರವಾರ:ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಮ್ಮನೆರಳು ನಮ್ಮ ಹಿಂದೆ ಸುತ್ತುತ್ತದೆ. ಆದರೆ, ಇಂದು ಮಾತ್ರ ಕಾರವಾದಲ್ಲಿ ಕೆಲ ನಿಮಿಷದವರೆಗೆ ನಮ್ಮ ನೆರಳೆ ಮಾಯಾವಾಗಿ ಕೌತುಕಕ್ಕೆ ಕಾರಣವಾಗಿತ್ತು.
ಹೌದು, ಕಾರವಾರದಲ್ಲಿ ಇಂದು ಇಂತಹದೊಂದು ಶೂನ್ಯ ನೆರಳಿನ ವಿಜ್ಞಾನದ ಕೌತುಕ ಕಂಡುಬಂತು. ನಗರದ ಕೋಡಿಭಾಗದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಬವೊಂದನ್ನು ಬಿಸಿಲಿನಲ್ಲಿ ಇಟ್ಟು ಇದನ್ನು ಪತ್ತೆ ಹಚ್ಚಲಾಯಿತು. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳಲಿಲ್ಲ.
ಕಾರವಾರದಲ್ಲಿ ವಿಜ್ಞಾನದ ಕೌತುಕ; ನೆಲದಲ್ಲಿ ಕಾಣದ ನೆರಳು! ಸಾಮಾನ್ಯವಾಗಿ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸಲಿಲ್ಲ. ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಕಾಣಬಹುದಾಗಿದೆ. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ.
ಇಂದು ಸೂರ್ಯ ನಡು ನೆತ್ತಿಯ ಮೇಲಿದ್ದರಿಂದ (ಮಧ್ಯಾಹ್ನ 12ರಿಂದ 12.35ರ ನಡುವೆ) ಯಾವುದೇ ವಸ್ತುವಿನ ನೆರಳು ನೆಲಕ್ಕೆ ಬೀಳಲಿಲ್ಲ. ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿದೆ. ಕಾರವಾರದಲ್ಲಿ ಕಳೆದ ವರ್ಷ ಜೂನ್ ನಲ್ಲಿ ಶೂನ್ಯ ನೆರಳಿನ ದಿನವಾಗಿತ್ತು. ಆದರೆ, ಆ ಸಂದರ್ಭದಲ್ಲಿ ಮಳೆಗಾಲ ಆಗಿದ್ದರಿಂದ ಮೋಡದ ಕಾರಣ ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ ಎಂದು ಇಲ್ಲಿನ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ ದೇಶಪಾಂಡೆ ತಿಳಿಸಿದರು.