ಭಟ್ಕಳ:ಕಳೆದ ಎರಡು ವಾರದ ಹಿಂದೆ ನಟ ಪುನೀತ್ ರಾಜ್‌ಕುಮಾರ್ (puneeth rajkumar) ಅವರು ಆಕಸ್ಮಿಕ ಹೃದಯಾಘಾತದಿಂದ (Heart Attack) ಮೃತಪಟ್ಟ ಬಳಿಕ ತಾಲೂಕಿನಲ್ಲಿ ಯುವ ಜನತೆ ತಮ್ಮ ಆರೋಗ್ಯದ ಕಾಳಜಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.
ಭಟ್ಕಳದ ಸರ್ಕಾರಿ ಆಸ್ಪತ್ರೆ(Bhatkal govt hospital)ಯಲ್ಲಿ ದಿನಕ್ಕೆ ಕನಿಷ್ಠ ಮೂವರು, ಹೊರರೋಗಿಯಲ್ಲಿ ಶೇ. 40ರಷ್ಟು ಯುವ ಜನತೆ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ದಿನದ ಹೊರ ರೋಗಿಗಳಲ್ಲಿನ ಶೇ. 40ರಷ್ಟು ಮಂದಿ ಎದೆ ನೋವು, ಉಸಿರಾಟದ ಸಮಸ್ಯೆಯಿದೆ ಎಂದು ಭಯದಲ್ಲಿಯೇ ಆಸ್ಪತ್ರೆಗೆ ಬಂದು ತಪಾಸಣೆಗೆ ಮಾಡಿಸಿಕೊಳ್ಳುತ್ತಿದ್ದಾರೆ. ಆಶ್ವರ್ಯಕರ ಸಂಗತಿಯೆಂದರೆ ಅದರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಪುನೀತ್ (Puneeth) ಸಾವು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದರೂ, ಜನರು ಬೆಚ್ಚಿ ಬೀಳುವ ಅವಶ್ಯಕತೆಯಿಲ್ಲ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ವೈದ್ಯರು.
ಹೃದಯಾಘಾತದ ಬಗ್ಗೆ ಹೆಚ್ಚಿದ ಜಾಗ್ರತೆ
ಭಟ್ಕಳದಲ್ಲಿ ಜನರಿಗೆ ಮೊದಲಿಗಿಂತ ಒಂದು ಪಟ್ಟು ಜಾಸ್ತಿಯೇ ಹೃದಯಾಘಾತದ ಸಮಸ್ಯೆಯ ಬಗ್ಗೆ ಜಾಗೃತಿ ಹೆಚ್ಚಿದಂತಿದೆ. ಈ ಮೊದಲು ಹೃದಯಾಘಾತದ ಸಮಸ್ಯೆಯಿದ್ದ ರೋಗಿಗಳಿಗೆ ಇಸಿಜಿ(ECG), ಸ್ಕ್ಯಾನಿಂಗ್ (Scanning) ಸೇರಿದಂತೆ ಇನ್ನಿತರ ತಪಾಸಣೆ ಮಾಡಿಸಲು ವೈದ್ಯರು ಸೂಚಿಸಿದಲ್ಲಿ ಅವೆಲ್ಲವೂ ಸುಮ್ಮನೆ ಎಂದು ವೈದ್ಯರ ಸೂಚನೆ ನಿರಾಕರಿಸುತ್ತಿದ್ದರು. ಆದರೆ, ಈಗ ಎಲ್ಲ ರೀತಿಯ ತಪಾಸಣೆ ಮಾಡಿಸಿ ಎಂದು ಅವರೇ ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂಬಂತಾಗಿದೆ.