ಸೈಕಲ್ ಮೂಲಕ ಯುವತಿ ದೇಶ ಪರ್ಯಟನೆ ಕಾರವಾರ: ದೇಶದಲ್ಲಿ ನಡೆದ ಕೆಲವೊಂದು ಘಟನೆಗಳಿಂದಾಗಿ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇತರ ಮಹಿಳೆಯರಿಗೆ ಆತಂಕ ಪಡುವಂತೆ ಮಾಡಿದೆ.
20 ಸಾವಿರ ಕಿ.ಮೀ ಯಾತ್ರೆ ಗುರಿ:ಆದರೆ ಭಾರತ, ಮಹಿಳೆಯರಿಗೆ ಸುರಕ್ಷಿತವಾಗಿದೆ ಅನ್ನೋದನ್ನ ತೋರಿಸಿಕೊಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಏಕಾಂಗಿಯಾಗಿ ಸೈಕಲ್ ಮೇಲೆ ದೇಶ ಪರ್ಯಟನೆಗೆ ಹೊರಟಿದ್ದಾರೆ. ಅದೂ ಸಹ ಬರೋಬ್ಬರಿ 20 ಸಾವಿರ ಕಿ.ಮೀ ಸೈಕಲ್ ಯಾತ್ರೆಯನ್ನ ಮಾಡುತ್ತಿದ್ದಾರೆ. ಒಂದೆಡೆ ಏಕಾಂಗಿಯಾಗಿ ಸೈಕಲ್ ತುಳಿಯುತ್ತಾ ಹೆದ್ದಾರಿಯಲ್ಲಿ ಸಾಗುತ್ತಿರುವ ಯುವತಿ. ಇನ್ನೊಂದೆಡೆ ರಸ್ತೆಯಲ್ಲಿ ಸಿಕ್ಕ ಜನರೊಂದಿಗೆ ಮಾತನಾಡುತ್ತಾ ಜಾಗೃತಿ ಮೂಡಿಸುತ್ತಿರುವ ಸೈಕಲ್ ಯಾತ್ರಿ.
ಮತ್ತೊಂದೆಡೆ ಜಿಲ್ಲೆಗೆ ಆಗಮಿಸಿರುವ ಸೈಕ್ಲಿಸ್ಟ್ ಯುವತಿಯನ್ನ ಅಭಿನಂದಿಸುತ್ತಿರುವ ಅಧಿಕಾರಿ. ಹೀಗೆ ಸೈಕಲ್ ಏರಿ ಏಕಾಂಗಿ ಯಾತ್ರೆ ಮಾಡುತ್ತಿರುವ ಯುವತಿಯ ಹೆಸರು ಆಶಾ ಮಾಲ್ವಿ. ಮಧ್ಯಪ್ರದೇಶದ ರಾಜಗಢ ಜಿಲ್ಲೆಯವರಾದ ಇವರು ಭಾರತ, ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವ ಸಂದೇಶವನ್ನ ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಸಂಪೂರ್ಣ ಭಾರತ ಸೈಕಲ್ ಯಾತ್ರೆಯನ್ನ ಹಮ್ಮಿಕೊಂಡಿದ್ದಾರೆ.
ನವೆಂಬರ್ 1 ರಂದು ಮಧ್ಯಪ್ರದೇಶದ ಭೋಪಾಲ್‌ನಿಂದ ತಮ್ಮ ಯಾತ್ರೆಯನ್ನ ಆರಂಭಿಸಿದ್ದು, ಬರೋಬ್ಬರಿ 20,000 ಕಿ.ಮೀ ಮಾರ್ಗವನ್ನ ಸೈಕಲ್ ಮೇಲೆ ಏಕಾಂಗಿಯಾಗಿ ಪೂರೈಸಲು ಮುಂದಾಗಿದ್ದಾರೆ. ಈಗಾಗಲೇ ಸುಮಾರು 3,700 ಕಿ.ಮೀ ಸೈಕಲ್ ತುಳಿದು ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿ ಇಂದು ಕಾರವಾರವನ್ನ ತಲುಪಿದ್ದಾರೆ.
ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಈ ನಿಟ್ಟಿನಲ್ಲಿ ಏಕಾಂಗಿಯಾಗಿ ಸೈಕಲ್ ಯಾತ್ರೆಯನ್ನ ಹಮ್ಮಿಕೊಂಡಿದ್ದಾಗಿ ಆಶಾ ತಿಳಿಸಿದ್ದಾರೆ. ಇನ್ನು ಆಶಾ ಈಗಾಗಲೇ ಮಧ್ಯಪ್ರದೇಶ, ಗುಜರಾತ್, ದಾದರ್ ಮತ್ತು ನಗರಹವೇಲಿ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ತಮ್ಮ ಸೈಕಲ್ ಯಾತ್ರೆಯನ್ನ ಪೂರ್ಣಗೊಳಿಸಿ ಇದೀಗ ಕರ್ನಾಟಕಕ್ಕೆ ಆಗಮಿಸಿದ್ದಾರೆ.
ಶಾಲಾ - ಕಾಲೇಜುಗಳಿಗೆ ಭೇಟಿ:ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳಿಗೆ ಭೇಟಿ ನೀಡುವ ಆಶಾ ಮಾಲ್ವಿ ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎನ್ನುವುದು ಬೇರೆ ದೇಶಗಳ ಅಭಿಪ್ರಾಯವಾಗಿದೆ. ಆದರೆ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದು, ಮಹಿಳೆಯರ ರಕ್ಷಣೆಯ ಕಾಳಜಿಯನ್ನ ಭಾರತ ಹೊಂದಿದೆ ಎನ್ನುವ ಜಾಗೃತಿಯನ್ನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ:ಜೊತೆಗೆ ಮಾರ್ಗಮಧ್ಯೆ ಸಿಗುವ ಜನಸಾಮಾನ್ಯರಿಗೂ ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆಯನ್ನ ಮುಂದುವರೆಸುತ್ತಿದ್ದಾರೆ. ಅದರಂತೆ ಇಂದು ಕಾರವಾರಕ್ಕೆ ಆಗಮಿಸಿದ ಅವರನ್ನು ಇಲ್ಲಿನ ತಹಶೀಲ್ದಾರ್ ಭೇಟಿಯಾಗಿ ಅಭಿನಂದಿಸಿದರು. ಯುವತಿಯೊಬ್ಬಳು ಏಕಾಂಗಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಅವರ ಯಾತ್ರೆ ಯಶಸ್ವಿಯಾಗಲೀ ಎಂದು ಶುಭಹಾರೈಸಿದ್ದಾರೆ.
ಇನ್ನು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಸಹ ಭೇಟಿಯಾಗುತ್ತಾರೆ. ಅವರಿಗೆ ತನ್ನ ಉದ್ದೇಶವನ್ನ ತಿಳಿಸಿ ಅವರ ಅಭಿಪ್ರಾಯವನ್ನ ಪಡೆದುಕೊಂಡು ಮುಂದೆ ಸಾಗುತ್ತಿದ್ದು ತನ್ನ ಯಾತ್ರೆಯನ್ನ ದೆಹಲಿಯಲ್ಲಿ ಪೂರ್ಣಗೊಳಿಸಲಿದ್ದಾರೆ.
ಇದನ್ನೂ ಓದಿ:ಕೊಲೆಯಾಗಿ ಏಳು ವರ್ಷದ ಬಳಿಕ ಬದುಕಿ ಬಂದ ಮಹಿಳೆ.. ತಮ್ಮ ಮೇಲಿದ್ದ ಮರ್ಡರ್ ಕೇಸ್ಗೆ ತಾವೇ ತನಿಖಾಧಿಕಾರಿಗಳಾದ ಆರೋಪಿಗಳು!