ಕಾರವಾರ: ನಮ್ಮ ರಾಷ್ಟ್ರದಲ್ಲಿ ಹಲವು ಮಹತ್ವದ ಸ್ಥಳಗಳು, ಸುಂದರ ತಾಣಗಳಿವೆ. ಆದರೆ, ಅದೆಷ್ಟೋ ಸಂಗತಿಗಳು ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ಕಾರವಾರದ ಯುವಕನೊಬ್ಬ ಸೈಕಲ್ ಮೂಲಕ ಗುಜರಾತಿನಲ್ಲಿರುವ ಸ್ಟ್ಯಾಚು ಆಫ್ ಯುನಿಟಿಗೆ ತೆರಳಿ ವಾಪಸ್ ಬಂದು ಅವುಗಳ ಮಹತ್ವದ ಬಗ್ಗೆ ಜನತೆಗೆ ತಿಳಿ ಹೇಳುತ್ತಿದ್ದಾರೆ.
ಹೌದು, ಕಾರವಾರದ ಕದಂಬ ನೌಕಾನೆಲೆ ಉದ್ಯೋಗಿಯಾಗಿರುವ ವಿಷ್ಣು ತೋಡ್ಕರ್ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರದ ಲಾಥೂರ್ನಿಂದ ಗುಜರಾತಿನಲ್ಲಿರುವ ಸ್ಟ್ಯಾಚು ಆಫ್ ಯುನಿಟಿವರೆಗೆ ಸೈಕಲ್ ಮೂಲಕ ಕ್ರಮಿಸಿ ಬಂದಿದ್ದಾರೆ. ಡಿಸೆಂಬರ್ 7 ರಂದು ತಮ್ಮ ಸೈಕಲ್ ಮೂಲಕ ಹೊರಟಿದ್ದ ಇವರು ಐದು ದಿನಗಳಲ್ಲಿ 800 ಕಿಲೋ ಮೀಟರ್ ಕ್ರಮಿಸಿ ಸ್ಟ್ಯಾಚು ಆಫ್ ಯುನಿಟಿ ತಲುಪಿದ್ದಾರೆ.
182 ಮೀಟರ್ ಎತ್ತರದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ದೇಶದ ಹೆಮ್ಮೆಯಾಗಿದೆ. ಹೀಗಾಗಿ ಲಾಥೂರ್ ಬೈಸಿಕಲ್ ಕ್ಲಬ್ ಸದಸ್ಯರು ಸೈಕಲ್ ಪ್ರಯಾಣದ ಬಗ್ಗೆ ತಿಳಿಸಿದಾಗ ತಮ್ಮ ಕೆಲಸಕ್ಕೆ ರಜೆ ಹಾಕಿ ಕಾರವಾರದಿಂದ ಲಾಥೂರ್ಗೆ ತೆರಳಿ ಅಲ್ಲಿಂದ ಸೈಕಲ್ನಲ್ಲಿ ಹೋಗಿ ಬಂದಿದ್ದಾರೆ. ತಮ್ಮ ಸೈಕಲ್ ಯಾನದಲ್ಲಿ ಕಡಿದಾದ ರಸ್ತೆ, ಘಟ್ಟ ಪ್ರದೇಶಗಳು ಹೀಗೆ ಎದುರಾದ ಎಲ್ಲ ಮಾರ್ಗಗಳನ್ನು ಯಶಸ್ವಿಯಾಗಿ ಕ್ರಮಿಸಿದ್ದೇನೆ ಎಂದು ವಿಷ್ಣು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.