ಭಟ್ಕಳ(ಉತ್ತರ ಕನ್ನಡ):ಎಟಿಎಂನಿಂದ ಬೇರೊಬ್ಬರ ಖಾತೆಗೆ ಜಮಾ ಮಾಡಲು ಬಂದ ವ್ಯಕ್ತಿಯೊಬ್ಬರ ಹಣ ಮಷಿನ್ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಾಪಸ್ ಬಂದಿದ್ದನ್ನು ಕಂಡ ಯುವಕ, ಆ ಹಣವನ್ನು ಪೊಲೀಸ್ ವಶಕ್ಕೆ ನೀಡಿ ವಾರಸುದಾರರಿಗೆ ಹಿಂದಿರುಗಿಸಿದ್ದಾನೆ.
ತಾಲೂಕಿನ ಬಂದರು ರಸ್ತೆಯಲ್ಲಿನ ಎಟಿಎಂಗೆ ಮಂಗಳವಾರ ಮಧ್ಯಾಹ್ನ ಬಿಲಾಲ್ ತನ್ವಿರ್ ಎಂಬಾತ ತನ್ನ ತಂದೆಯ ಖಾತೆಗೆ 1,74,000 ರೂ. ಜಮಾ ಮಾಡಿ ತೆರಳಿದ್ದರು. ಆದರೆ ಎಟಿಎಂನಲ್ಲಿನ ತಾಂತ್ರಿಕ ತೊಡಕಿನಿಂದ ಹಣ ವಾಪಸ್ ಬಂದಿತ್ತು. ಇದು ತನ್ವಿರ್ ಅರಿವಿಗೆ ಬಂದಿರಲಿಲ್ಲ. ಬಳಿಕ ಬೆಳಕೆಯ ದಿನಕರ ಗೊಂಡ ಎಂಬಾತ ಇದೇ ಎಟಿಎಂಗೆ ತೆರಳಿದ್ದಾನೆ. ಆಗ ವಾಪಸ್ ಬಂದಿದ್ದ ಹಣವನ್ನು ಕಂಡು, ನಗರ ಠಾಣೆಗೆ ಬಂದು ಪೊಲೀಸರ ವಶಕ್ಕೆ ನೀಡಿ ಘಟನೆ ಬಗ್ಗೆ ತಿಳಿಸಿದ್ದಾನೆ.