ಕಾರವಾರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕನೋರ್ವ 1200 ಚಾಕ್ ಪೀಸ್ಗಳಲ್ಲಿ ರಾಮ ಮಂದಿರದ ಮಾದರಿ ನಿರ್ಮಾಣ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಹೊನ್ನಾವರದ ಯುವಕನ ಕೈಚಳಕ: 1200 ಚಾಕ್ಪೀಸ್ ಬಳಸಿ ರಾಮ ಮಂದಿರ ಮಾದರಿ ನಿರ್ಮಾಣ! ಹೊನ್ನಾವರ ತಾಲೂಕಿನ ಗೇರುಸೊಪ್ಪದ ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರ ಪ್ರದೀಪ್ ನಾಯ್ಕ ಹೀಗೆ ರಾಮಮಂದಿರ ಮಾದರಿ ನಿರ್ಮಾಣ ಮಾಡಿರುವ ಕಲಾವಿದ. ಚಿಕ್ಕಂದಿನಿಂದಲೂ ವಿವಿಧ ಕಲೆಗಳ ಮೇಲೆ ಆಸಕ್ತಿ ಹೊಂದಿರುವ ಇವರು ಚಿತ್ರಕಲೆ, ತಬಲಾ, ಸಂಗೀತ, ಚಾಕ್ಪೀಸ್ ಆರ್ಟ್ ಹೀಗೆ ಹಲವು ರಂಗಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ.
ಇದೀಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಅಣಿಯಾಗಿರುವ ಶ್ರೀ ರಾಮ ಮಂದಿರದ ಮಾದರಿಯನ್ನು ಸುಮಾರು 1200 ಚಾಕ್ಪೀಸ್ಗಳನ್ನು ಬಳಸಿ ತಯಾರಿಸಿದ್ದಾರೆ. 25 ದಿನಗಳ ಕಾಲ 250ಕ್ಕೂ ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ಅದ್ಭುತವಾದ ಶ್ರೀ ರಾಮ ಮಂದಿರದ ಮಾದರಿ ಕಲಾಕೃತಿ ನಿರ್ಮಾಣವಾಗಿದೆ. ಜನವರಿ 22ರಂದು ನಡಯಲಿರುವ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆಯ ದಿನವೇ ಕಲಾವಿದ ಪ್ರದೀಪ್ ನಾಯ್ಕ ತಮ್ಮ ಕಲೆಯನ್ನು ಗೇರುಸೊಪ್ಪದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ-ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ.
2021ರ ಮೇ 22 ರಂದು 18 ಚಾಕ್ಪೀಸ್ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತುವ ಮೂಲಕ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪ್ರದೀಪ್ ಸಾಧನೆ ಮಾಡಿದ್ದರು. ಬುದ್ಧ, ಗಾಂಧೀಜಿ, ಐಫೆಲ್ ಟವರ್, ಸೂರ್ಯನಮಸ್ಕಾರದ ಆಕೃತಿ ಹೀಗೆ ಹತ್ತು ಹಲವು ಆಕೃತಿಗಳನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪ್ರಸ್ತುತ ಧಾರವಾಡದ ವಿದ್ಯಾಗಿರಿ ಜೆ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ: ಬೈಕ್ ಮೂಲಕ ಅಯೋಧ್ಯೆಗೆ ಹೊರಟ ಯುವಕರು