ಕಾರವಾರ :ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವ ಜೊತೆಗೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಯುವಕನೋರ್ವ ಸೈಕಲ್ ಪರ್ಯಟನೆ ಹೊರಟಿದ್ದು, ಕಾರವಾರಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾನೆ.
ಸೈಕಲ್ ಜಾಥಾ ಮೂಲಕ ಯುವಕನ ಆಗ್ರಹ ಬೆಂಗಳೂರಿನ ಬಸವನಪುರದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಕಿರಣ್ ವಿ. ಸೈಕಲ್ ಜಾಥಾ ನಡೆಸುತ್ತಿರುವ ವಿದ್ಯಾರ್ಥಿ. ದೇಶ ಹಾಗೂ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ.
ಆದರೆ, ಇಂತಹ ಕೃತ್ಯದಲ್ಲಿ ಭಾಗಿಯಾದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತಾಗಬೇಕು ಎಂದು ಆಗಸ್ಟ್ 22 ರಂದು ಬೆಂಗಳೂರಿನಿಂದ ಹೊರಟಿರುವ ಯುವಕ 17 ಜಿಲ್ಲೆಗಳಿಗೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾನೆ.
ವಿವಿಧ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಿ ಹಾಗೂ ರಸ್ತೆಯಲ್ಲಿ ತೆರಳುವಾಗ ವಿಚಾರಿಸುವವರಿಗೆ ಅತ್ಯಾಚಾರ ತಡೆಗಟ್ಟಲು ಕಠಿಣ ಕಾನೂನಿಗೆ ಆಗ್ರಹಿಸುವಂತೆ ಮನವರಿಕೆ ಮಾಡುತ್ತಿದ್ದೇನೆ. ದೇಶ ಹಾಗೂ ರಾಜ್ಯದಲ್ಲಿ ಅತ್ಯಾಚಾರ ನಿಲ್ಲಬೇಕು. ಈ ಕಾರಣದಿಂದ ರಾಜ್ಯದ 31 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಕಠಿಣ ಕಾನೂನು ಜಾರಿಗೆ ಆಗ್ರಹಿಸುವುದಾಗಿ ಯುವಕ ತಿಳಿಸಿದ್ದಾನೆ.