ಕಾರವಾರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ತಕ್ಷಣ ಕಣ್ಮುಂದೆ ಬರೋದು ಠಾಣೆ ಮುಂದೆ ನಿಂತ ನಾಲ್ಕಾರು ಹಳೆ ವಾಹನಗಳು, ಬಣ್ಣ ಮಾಸಿದ ಗೋಡೆ, ಗಿಡಗಂಟಿಗಳು ಬೆಳೆದುನಿಂತ ಇಕ್ಕಟ್ಟಾದ ಪ್ರದೇಶ. ಇಂತಹ ಠಾಣೆಗಳಿಗೆ ಜನ ಬರುವುದಕ್ಕೂ ಹಿಂದೆಮುಂದೆ ನೋಡುವ ಇಂದಿನ ದಿನಗಳಲ್ಲಿ ಇಲ್ಲೊಂದು ಪೊಲೀಸ್ ಠಾಣೆ ಮಾತ್ರ ಸಾಕಷ್ಟು ಡಿಫರೆಂಟ್ ಆಗಿ ಜನಸಾಮಾನ್ಯರನ್ನ ಆಕರ್ಷಿಸುತ್ತಿದೆ. ಮಾತ್ರವಲ್ಲದೆ ಬಂದಂತಹ ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಒದಗಿಸುವ ಮೂಲಕ ಜನಸ್ನೇಹಿಯಾಗಿ ರೂಪುಗೊಂಡಿದೆ.
ಹೌದು, ಒಂದೆಡೆ ಪೊಲೀಸ್ ಠಾಣೆ ಗೋಡೆ ಮೇಲೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಚಿತ್ತಾಕರ್ಷಕ ಚಿತ್ರಗಳು. ಇನ್ನೊಂದೆಡೆ ರಸ್ತೆಯಲ್ಲಿ ಹೋಗಿಬರುವವರೆಲ್ಲರೂ ಠಾಣೆಯ ಗೋಡೆಗಳತ್ತ ಕಣ್ಣಾಡಿಸಿ ಮಾಹಿತಿ ಗಮನಿಸುತ್ತಿರುವ ಜನರು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಕುಳಿತು ವಿರಮಿಸುತ್ತಿರುವ ಜನ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ.
'ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯಲ್ಲಿ ಯಲ್ಲಾಪುರ ತಾಲ್ಲೂಕಿನ ಪೊಲೀಸ್ ಠಾಣೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್ ಠಾಣೆ ಎಂದಾಗ ಮೂಡುವ ಭಯದ ಸಾಮಾನ್ಯ ಭಾವನೆಯನ್ನು ದೂರ ಮಾಡಲು ಈ ಮೂಲಕ ಪ್ರಯತ್ನಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ವರ್ಷದ ಹಿಂದೆ ಇಕ್ಕಟ್ಟಾದ ಪ್ರದೇಶದಲ್ಲಿ ಕಾಂಪೌಂಡ್ ಇಲ್ಲದೆ ಇದ್ದ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ ಆಗಮಿಸಿದ್ದ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ಮೊದಲು ಠಾಣೆ ವಾತಾವರಣ ಸರಿಪಡಿಸಲು ಯೋಚಿಸಿದ್ದರಂತೆ. ಅದರಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸ್ಥಳೀಯರ ಸಹಕಾರದಲ್ಲಿ ಠಾಣೆಗೆ ಕಾಂಪೌಂಡ್ ನಿರ್ಮಿಸಿ, ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಬಳಿಯಲಾಯಿತು. ಬಳಿಕ ಅದರ ಮೇಲೆ ಉತ್ತರಕನ್ನಡ ಜಿಲ್ಲೆಯ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ.