ಕಾರವಾರ(ಉತ್ತರ ಕನ್ನಡ):ಕೊರೊನಾ ಅಟ್ಟಹಾಸದಿಂದಾಗಿ ಕಳೆದೆರಡು ವರ್ಷಗಳಿಂದ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಮಹಾಮಾರಿಯ ರುದ್ರನರ್ತನಕ್ಕೆ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೆ ಅದೆಷ್ಟೊ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇಂತಹ ಕಲಾವಿದರಿಗೆ ಸ್ವಲ್ಪ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್ ಪಡೆಯಲು ಎದುರಾದ ತಾಂತ್ರಿಕ ತೊಂದರೆ ಹಾಗೂ ಕಲಾವಿದರನ್ನು ಗುರುತಿಸುವಲ್ಲಿ ವಿಫಲವಾದ ಮಾನದಂಡದಿಂದಾಗಿ ಅದೆಷ್ಟೊ ಕಲಾವಿದರಿಗೆ ಪರಿಹಾರವೇ ಸಿಗದಂತಾಗಿದೆ.
ಹೌದು, ಕೊರೊನಾ ಕಾರಣಕ್ಕೆ ವಿಧಿಸಿದ್ದ ಲಾಕ್ಡೌನ್ನಿಂದಾಗಿ ಅದೆಷ್ಟೋ ಕಲಾವಿದರ ಸ್ಥಿತಿ ಅಯೋಮಯವಾಗಿದೆ. ಕಲೆಯನ್ನೇ ಉಸಿರಾಗಿಸಿಕೊಂಡು ಜೀವನ ನಡೆಸುತ್ತಿದ್ದ ಕಲಾವಿದರಿಗೆ ಕೋವಿಡ್ ಬರಸಿಡಿಲಿನಂತೆ ಬಡಿದಿದೆ. ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿದ ಕಠಿಣ ಕ್ರಮದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಇದನ್ನು ಅರಿತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಲಾವಿದರಿಗೆ ತಲಾ 3 ಸಾವಿರ ರೂ. ಲಾಕ್‌ಡೌನ್ ಪರಿಹಾರ ನೀಡುವುದಾಗಿ ತಿಳಿಸಿದ್ದರು.
ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಈ ಅವಧಿಯಲ್ಲಿ ಲಾಕ್ ಡೌನ್ ಇದ್ದಿದ್ರಿಂದ ಬಹುತೇಕ ಕಲಾವಿದರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಬೇಕಾದ್ರೆ 35 ವರ್ಷ ವಯಸ್ಸಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. 2020-21 ನೇ ಸಾಲಿನ ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ, ಸಾಂಸ್ಕೃತಿಕ ಚಟುವಟಿಕೆಗೆ ಕಲಾ ಸಂಘಗಳ ಪರವಾಗಿ ಸಹಾಯಧನ ಪಡೆದಿರಬಾರದು, ವಾದ್ಯ ಪರಿಕರ, ವೇಷಭೂಷಣ ಖರೀದಿ, ಶಿಲ್ಪಕಲೆ ಚಿತ್ರಕಲಾ ಪ್ರದರ್ಶನಕ್ಕೆ ಸಹಾಯಧನ ಪಡೆದಿರಬಾರದು. ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿ ಕನಿಷ್ಠ 10 ವರ್ಷವಾಗಿರಬೇಕು. ಹೀಗೆ ಹತ್ತಾರು ನಿಯಮಾವಳಿಗಳನ್ನು ವಿಧಿಸಲಾಗಿದೆ. ಪರಿಣಾಮ ಸಾವಿರಾರು ಕಲಾವಿದರನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಕೇವಲ 595 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.