ಕರ್ನಾಟಕ

karnataka

ETV Bharat / state

Gruhalakshmi Yojana: ಮಳೆ ಲೆಕ್ಕಿಸದೆ ಸೇವಾ ಕೇಂದ್ರದ ಮುಂದೆ ಜಮಾಯಿಸಿದ ಗೃಹಲಕ್ಷ್ಮಿಯರು

Gruhalakshmi Yojana: ಮಳೆಯನ್ನು ಲೆಕ್ಕಿಸದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗಾಗಿ ಮಹಿಳೆಯರು ಸೇವಾ ಕೇಂದ್ರಗಳತ್ತ ಧಾವಿಸಿ ಬರುತ್ತಿದ್ದಾರೆ.

ಸಾಲುಗಟ್ಟಿನಿಂತ ಮಹಿಳೆಯರು
ಸಾಲುಗಟ್ಟಿನಿಂತ ಮಹಿಳೆಯರು

By

Published : Jul 26, 2023, 2:30 PM IST

ಮಹಿಳೆಯರಿಗೆ ಜಿಲ್ಲಾಧಿಕಾರಿ ಕಿವಿಮಾತು

ಕಾರವಾರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಒಂದಾಗಿದ್ದು, ಅರ್ಜಿ ಸಲ್ಲಿಕೆಗೆ ಸರ್ವರ್ ಪ್ರಾಬ್ಲಮ್ ಸಮಸ್ಯೆ ಮುಂದುವರಿದಿದೆ. ಆದರೂ ಅರ್ಜಿ ಸಲ್ಲಿಕೆಗಾಗಿ ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು ಮೊಬೈಲ್​ ಹಿಡಿದು ತಾಲೂಕು ಕೇಂದ್ರಗಳತ್ತ ಬರುತ್ತಿದ್ದು, ತಹಶೀಲ್ದಾರ್ ಕಚೇರಿ ಸೇರಿದಂತೆ ಸೇವಾ ಸಿಂಧು ಕೇಂದ್ರಗಳಲ್ಲಿ ಜನಜಂಗುಳಿ ಸೃಷ್ಟಿಯಾಗಿದೆ.

ಕಾಂಗ್ರೆಸ್ ಚುನಾವಣಾ ಪೂರ್ವ ಘೋಷಿಸಿದ್ದ ಮಹಿಳೆಯರಿಗೆ 2 ಸಾವಿರ ಸಹಾಯಧನ ನೀಡುವ ‘ಗೃಹಲಕ್ಷ್ಮೀ' ಯೋಜನೆಯನ್ನು ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.20ರಿಂದ ನೋಂದಣಿ ಶುರುವಾಗಿದೆ. ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸ್ಲಾಟ್‌ಗಳನ್ನು ಮಹಿಳೆಯರ ಮೊಬೈಲ್ ಸಂಖ್ಯೆಗಳಿಗೆ ಮೆಸೇಜ್ ಮೂಲಕ ಕಳುಹಿಸಲಾಗುತ್ತಿದೆ. ಆ ಮೆಸೇಜ್‌ನಲ್ಲಿ ತಿಳಿಸಿದ ದಿನ ಹಾಗೂ ಕೇಂದ್ರಕ್ಕೆ ಮಹಿಳೆಯರು ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಲವೆಡೆ ನೆಟ್‌ವರ್ಕ್ ಸಮಸ್ಯೆ ಇದ್ದರೆ, ರಾಜ್ಯ ಸರ್ಕಾರದ ಪೋರ್ಟಲ್‌ನಲ್ಲಿ ಸರ್ವರ್ ಸಮಸ್ಯೆ ಕೂಡ ಉಂಟಾಗುತ್ತಿದೆ. ಇದರಿಂದಾಗಿ ಒಂದು ಕೇಂದ್ರದಲ್ಲಿ ದಿನಕ್ಕೆ 100 ಅರ್ಜಿ ಸಲ್ಲಿಕೆಯಾದರೂ ಹೆಚ್ಚೇ ಎಂಬಂತಾಗಿದೆ. ಇದರಿಂದಾಗಿ ಮಾಹಿತಿ ಇಲ್ಲದ ಅನೇಕ ಮಹಿಳೆಯರು ತಮ್ಮ ಗ್ರಾಮಗಳನ್ನ ಬಿಟ್ಟು ತಾಲೂಕು ಕೇಂದ್ರದ ತಹಶೀಲ್ದಾರ್ ಕಚೇರಿಗಳಿಗೆ, ಕರ್ನಾಟಕ ಒನ್ ಸೆಂಟರ್‌ಗಳಿಗೆ ನುಗ್ಗುತ್ತಿದ್ದಾರೆ. ಇಲ್ಲಿಯೂ ತಾಂತ್ರಿಕ ಸಮಸ್ಯೆಗಳಿಂದಾಗಿ ಅರ್ಜಿ ಸಲ್ಲಿಕೆಗೆ ಸಮಯ ತೆಗೆದುಕೊಳ್ಳುತ್ತಿದ್ದು, ದಿನವಿಡೀ ಕೆಲಸ ಮಾಡಿದರೂ ಮಹಿಳೆಯರು ಸಾಲು ಕಡಿಮೆಯಾಗುತ್ತಿಲ್ಲ ಎಂಬಂತಾಗಿದೆ.

ಜಿಲ್ಲೆಯಲ್ಲಿ ಭಾರಿ ಮಳೆ ಇರುವ ಕಾರಣ ಹಾಗೂ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ನೂಕುನುಗ್ಗಲಾಗುತ್ತಿರುವ ಸಂಬಂಧ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನವೆಂದಿಲ್ಲ. ಯಾವುದೇ ನೂಕುನುಗ್ಗಲು ಮಾಡಿಕೊಳ್ಳದೆ ಅರ್ಜಿ ಸಲ್ಲಿಸಲು ಸಮೀಪದ ಕೇಂದ್ರಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಅಲ್ಲದೇ ಅರ್ಜಿ ಸಲ್ಲಿಕೆಗೆ ಹಣ ಪಡೆಯುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಹಣ ಪಡೆದರೆ ಕ್ರಿಮಿನಲ್​ ಕೇಸ್ ಎಚ್ಚರಿಕೆ​:ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾರಾದರೂ ಜನರಿಂದ ಹಣ ಪಡೆದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕೂಡ ಖಡಕ್ ಎಚ್ಚರಿಕೆ ನೀಡಿದ್ದರು. ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ಬಹಳಷ್ಟು ಕಷ್ಟಪಟ್ಟು ಜಾರಿ ಮಾಡಿದ್ದೇವೆ. ಇದರಲ್ಲೂ ದುಡ್ಡು ಪಡೆಯುತ್ತಿರುವುದು ಗಮನಕ್ಕೆ ಬಂದರೆ ಅಂಥವರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ವಾಪಸ್ ಪಡೆಯಲು ಸೂಚನೆ ನೀಡಿದ್ದೇವೆ. ಅಲ್ಲದೇ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಸೇವಾಕೇಂದ್ರಗಳ ಕೊರತೆ.. ದಿನವಿಡಿ ಕ್ಯೂ ನಲ್ಲಿ ನಿಂತು ಸುಸ್ತಾದ ಹಾವೇರಿ ಮಂದಿ-ವಿಡಿಯೋ

ABOUT THE AUTHOR

...view details