ಕಾರವಾರ: ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡದಲ್ಲಿ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದರಲ್ಲೂ ಕಾಲೇಜು ಯುವತಿಯರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿದ್ದು, ಕಳೆದ 11 ತಿಂಗಳ ಅವಧಿಯಲ್ಲಿ 200 ಕ್ಕೂ ಅಧಿಕ ಮಿಸ್ಸಿಂಗ್ ಕೇಸ್‌ಗಳು ದಾಖಲಾಗಿರೋದು ಜಿಲ್ಲೆಯ ಜನರನ್ನ ಆತಂಕಕ್ಕೀಡು ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು, ಇಲ್ಲಿಯ ಜನ ಶಾಂತ ಸ್ವಭಾವದವರು ಎನ್ನುವ ಖ್ಯಾತಿ ಗಳಿಸಿಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವತಿಯರು, ಮಹಿಳೆಯರ ನಾಪತ್ತೆ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಕಳೆದ 11 ತಿಂಗಳ ಅವಧಿಯಲ್ಲಿ ಇನ್ನೂರಕ್ಕೂ ಅಧಿಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ 2019ರಲ್ಲಿ 257 ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಇನ್ನೂ ತನಿಖೆಯಲ್ಲಿದ್ದವು. 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ 212 ನಾಪತ್ತೆ ಪ್ರಕರಣ ದಾಖಲಾಗಿ 197 ಮಂದಿ ಪತ್ತೆಯಾಗಿದ್ದಾರೆ. 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.
ಕಳೆದೆರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ - ಅಂಶ ಕಡಿಮೆ ಎನ್ನುವಂತಿದ್ದರೆ, ಪ್ರಸ್ತುತ 2021ರ ಅಂಕಿ - ಅಂಶ ಆತಂಕ ಮೂಡಿಸುವಂತಿದೆ. 2021ರಲ್ಲಿ ನವೆಂಬರ್ ತಿಂಗಳನ್ನ ಹೊರತುಪಡಿಸಿ 11 ತಿಂಗಳ ಅವಧಿಯಲ್ಲೇ 232 ಪ್ರಕರಣ ದಾಖಲಾಗಿವೆ. ಈ ಎಲ್ಲ ಅಂಕಿ ಅಂಶಗಳನ್ನ ಗಮನಿಸಿದಾಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಯುವತಿಯರ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ ಅಂತಾರೇ ಸ್ಥಳೀಯರು.