ಕಾರವಾರ(ಉ.ಕ) :ವರದಕ್ಷಿಣೆ ಪಿಡುಗು ಇಂದಿಗೂ ಸಮಾಜದ ಸ್ವಾಸ್ತ್ಯ ಹಾಳುಗೆಡುವುದರ ಜೊತೆಗೆ ಮಹಿಳೆಯರ ಜೀವನವನ್ನ ಸಂಕಷ್ಟಕ್ಕೆ ತಳ್ಳುತ್ತಿದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದಿರು ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ.
ವಿವಾಹವಾಗಿ ಮೂರು ವರ್ಷಗಳಿಂದ ಪತಿ ಹಾಗೂ ನಾದಿನಿಯಿಂದ ವರದಕ್ಷಿಣೆ ಕಿರುಕುಳ ಅನುಭವಿಸಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದು, ನರಕದಿಂದ ಹೊರ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಮೇಲೆ ಸುಟ್ಟ ಗಾಯ, ಮಹಿಳೆಗೆ ನರಕ ದರ್ಶನ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕುಂಟವಾಣಿಯ ಸುಧಾಳನ್ನು 6 ವರ್ಷಗಳ ಹಿಂದೆ ಕುಂದಾಪುರದ ಬಡಾಕೆರೆಯ ನರಸಿಂಹ ಗಾಣಿಗ ಎಂಬಾತನ ಜೊತೆ ಮದುವೆ ಮಾಡಿ ಕೊಡಲಾಗಿತ್ತು. 3 ವರ್ಷದವರೆಗೂ ಪತಿಯ ಮನೆಯಲ್ಲಿ ವಾಸವಾಗಿದ್ದರು. ಬೆಂಗಳೂರಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪತಿ ನರಸಿಂಹ ಬಳಿಕ ಪತ್ನಿ ಮಕ್ಕಳನ್ನು ಅಲ್ಲಿಗೆ ಕರೆಸಿಕೊಂಡಿದ್ದ.
ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನರಸಿಂಹನ ತಂಗಿ ನೇತ್ರಾವತಿ ಕೂಡ ಜೊತೆಗೆ ವಾಸಿಸುತ್ತಿದ್ದಳು.
ವರದಕ್ಷಿಣೆಗಾಗಿ ದೇಹವೆಲ್ಲ ಸುಟ್ಟು ಚಿತ್ರಹಿಂಸೆ ಕೊಟ್ಟ ಆರೋಪ ಆದರೆ, ಕ್ರಮೇಣ ಇಬ್ಬರಿಂದಲೂ ವರದಕ್ಷಿಣಿಗಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದರು ಎನ್ನಲಾಗಿದೆ. ಗಂಡ ಹೋಟೆಲ್ ಕೆಲಸಕ್ಕೆ ತೆರಳಿದ ಬಳಿಕ ನಾದಿನಿ ಬಿಸಿ ಚಮಚದಿಂದ ಮೈಮೇಲೆ ಸುಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಗಂಡನಿಗೆ ವಿಷಯ ತಿಳಿಸಿದರೂ ಆತ ಕೂಡ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ತವರು ಮನೆಯಿಂದ ಕರೆ ಬಂದರೆ ಪತಿ ನರಸಿಂಹ ಸ್ವೀಕರಿಸಿ ಇಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳಿ ಕರೆ ಕಟ್ ಮಾಡುತ್ತಿದ್ದನಂತೆ. ಪತ್ನಿಗೆ ನೀಡುತ್ತಿದ್ದ ಹಿಂಸೆ ಅರಿತ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹುಚ್ಚಿ ಪಟ್ಟ ಕಟ್ಟಿದ್ದರು
ಪತಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಲು ಮುಂದಾದಾಗ ಪೊಲೀಸರ ಬಳಿ ಆಕೆ ಹುಚ್ಚಿ, ಆಕೆಯೇ ಎಲ್ಲವನ್ನು ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಬಳಿಕ ಪೊಲೀಸರು ಸುಧಾಳ ಪೋಷಕರಿಗೆ ವಿಷಯ ತಿಳಿಸಿ ಕೂಡಲೇ ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ. ಬೆಂಗಳೂರಿಗೆ ಬಂದಿಳಿದ ಕುಟುಂಬಸ್ಥರಿಗೆ ಸುಧಾಳ ಸ್ಥಿತಿ ಕಂಡು ಶಾಕ್ ಆಗಿದೆ.
ಮಗಳ ಸ್ಥಿತಿ ಕಂಡು ಕಂಗಾಲಾದ ಹೆತ್ತವರು
ಮಗಳ ಮುಖ, ಕೈ-ಕಾಲು, ಕೂದಲು, ಹೊಟ್ಟೆ ಸೇರಿ ದೇಹದ ಎಲ್ಲಾ ಅಂಗಾಂಗಳನ್ನು ಸುಟ್ಟಿದ್ದು ಕಾಲಿಗೆ ಗಾಯವಾಗಿತ್ತು. ಸದ್ಯ ಈ ಕುರಿತು ಪತಿ ಹಾಗೂ ಅತ್ತಿಗೆ ನೇತ್ರಾವತಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸುಧಾಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಓದಿ:ಹೆಬ್ಬಾವು-ಕಾಳಿಂಗ ನಡುವೆ ಬಿಗ್ ಫೈಟ್ : ಹೆಬ್ಬಾವಿನ ಸ್ಥಿತಿ ಗಂಭೀರ