ಕಾರವಾರ:ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಯವರನ್ನುರಾಜ್ಯ ಬಿಜೆಪಿಯಲ್ಲಿ 'ಹಿಂದೂ ಫೈರ್ ಬ್ರಾಂಡ್' ರಾಜಕಾರಣಿ ಎಂದೇ ಕರೆಯಲಾಗುತ್ತದೆ. ಸತತ 6ನೇ ಬಾರಿಗೆ ಸಂಸತ್ ಪ್ರವೇಶ ಮಾಡಿರುವ ಹೆಗಡೆ ರಾಜ್ಯದಲ್ಲಿ ಹಿರಿಯ ಸಂಸದರೂ ಹೌದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇವರು ಕೇಂದ್ರ ರಾಜಕಾರಣದಿಂದ ರಾಜ್ಯ ಕಾರಣದತ್ತ ಮರಳುತ್ತಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡುತ್ತಿದೆ.
ಅನಂತಕುಮಾರ್ ಹೆಗಡೆ ರಾಜ್ಯ ಬಿಜೆಪಿ ಪಕ್ಷದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ನಾಯಕ. ಒಮ್ಮೆ ಕೇಂದ್ರ ಸಚಿವರಾಗಿಯೂ ಸಹ ಕೆಲಸ ಮಾಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳು, ಕಠೋರ ಹಿಂದುತ್ವವಾದದ ಮೂಲಕ ಹಿಂದೂ ಫೈರ್ ಬ್ರಾಂಡ್ ರಾಜಕಾರಣಿ ಎಂದೇ ಗುರುತಿಸಿಕೊಂಡವರು.
ಶಿರಸಿ/ಯಲ್ಲಾಪುರ ಕ್ಷೇತ್ರದಿಂದ ಕಣಕ್ಕೆ?:ಅನಂತಕುಮಾರ್ ಹೆಗಡೆ ಈ ಬಾರಿ ಕೇಂದ್ರ ರಾಜಕಾರಣದತ್ತ ಹೆಚ್ಚಿನ ಆಸಕ್ತಿ ವಹಿಸಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಶಿರಸಿ ಅಥವಾ ಯಲ್ಲಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.