ಕಾರವಾರ(ಉತ್ತರಕನ್ನಡ):ಎರಡು ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯಕ್ಕೊಳಗಾದ ಪತಿ ಉಳಿಸಿಕೊಳ್ಳಲು ಇದೀಗ ಪತ್ನಿಯೇ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ. ಆದರೆ ಕಿಡ್ನಿ ವರ್ಗಾವಣೆಗಾಗಿ 15 ಲಕ್ಷ ಹಣ ಬೇಕಿರುವುದರಿಂದ ಈ ಕುಟುಂಬ ಸಂಕಷ್ಟಕ್ಕೆ ಸಿಲುಕಿ ದಾನಿಗಳ ನೆರವಿಗೆ ಮುಂದಾಗಿದೆ.
2 ಕಿಡ್ನಿ ವೈಫಲ್ಯ: ಹೌದು ಕಾರವಾರ ತಾಲೂಕಿನ ಕೋಡಿಭಾಗದ ಸಚಿನ್ ಬಾಳು ರೇವಂಡಿಕರ್ ಕಳೆದ ಆರೇಳು ತಿಂಗಳ ಹಿಂದೆ ಕಿಡ್ನಿ ಸಮಸ್ಯೆಯಿಂದಾಗಿ ತೀವ್ರ ಅನಾರೊಗ್ಯ ಸಮಸ್ಯೆಗೊಳಗಾಗಿದ್ದರು. ಸ್ಥಳೀಯ ಆಸ್ಪತ್ರೆಗಳಿಗೆ ತೋರಿಸಲಾಗಿತ್ತಾದರೂ ದೊಡ್ಡ ಆಸ್ಪತ್ರೆಗೆ ತೋರಿಸುವಂತೆ ಚೀಟಿ ಬರೆದಿದ್ದರು. ಬಳಿಕ ಮಣಿಪಾಲ ಆಸ್ಪತ್ರೆ ತೆರಳಿ ಚಿಕಿತ್ಸೆ ತೋರಿಸಿದಾಗ ಎರಡು ಕಿಡ್ನಿ ವೈಫಲ್ಯಗೊಂಡಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಇದರಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕುಟುಂಬ ಅಲ್ಲಿಯೇ ಚಿಕಿತ್ಸೆ ಕೊಡಿಸಿದೆ.
ಬಳಿಕ ಪರಿಹಾರಕ್ಕಾಗಿ ಅಲ್ಲಿಯೇ ವಿಚಾರಿಸಿದಾಗ ಯಾರಾದರೂ ಕಿಡ್ನಿ ನೀಡಿದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ವೈದ್ಯರು ತಿಳಿಸಿದ್ದರು. ಅದರಂತೆ ಕಳೆದ ಹತ್ತು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದ ಈತನ ಪತ್ನಿ ಪ್ರತಿಭಾ ರೇವಂಡಿಕರ್ ತಾನೇ ಕಿಡ್ನಿ ನೀಡುವುದಕ್ಕೆ ಮುಂದೆ ಬಂದಿದ್ದಾರೆ. ಸದ್ಯ ಆಕೆಯ ವೈದ್ಯಕೀಯ ತಪಾಸಣೆ ಕೂಡ ಪೂರ್ಣಗೊಂಡಿದ್ದು, ಕಿಡ್ನಿ ಹೋಲಿಕೆಯಾಗುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಆದರೆ, ಕಿಡ್ನಿ ವರ್ಗಾವಣೆಗೆ 10-15 ಲಕ್ಷ ರೂ ಬೇಕಿದ್ದು, ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಇದೀಗ ಇಷ್ಟೊಂದು ಹಣ ಹೊಂದಿಸಲಾಗದೇ ಸಂಕಷ್ಟಕ್ಕೆ ಸಿಲುಕಿದೆ.
ಯಾರಾದಾರು ದಾನಿಗಳು ಸಹಾಯ ಮಾಡಿದ್ದಲ್ಲಿ ಕಿಡ್ನಿ ವರ್ಗಾವಣೆಗೆ ಸಹಾಯವಾಗಲಿದೆ ಎಂದು ಕಿಡ್ನಿ ವೈಫಲ್ಯ ಸಮಸ್ಯೆ ಎದುರಿಸುತ್ತಿರುವ ಸಚಿನ್ ರೇವಂಡಿಕರ್ ಮನವಿ ಮಾಡಿದ್ದಾರೆ. ಇನ್ನು ಕಿತ್ತು ತಿನ್ನುವ ಬಡತನದ ನಡುವೆ ಗಂಡನ ದುಡಿಮೆಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದಾಗ ಇಂತಹದೊಂದು ದೊಡ್ಡ ಸಂಕಷ್ಟ ಬಂದೊದಗಿದೆ. ಅಲ್ಲದೇ ನಮಗೆ ಪುಟ್ಟ ಮಗ ಕೂಡ ಇದ್ದು ಆತನ ಭವಿಷ್ಯದ ಚಿಂತೆ ಕಾಡತೊಡಗಿದೆ. ಆದರೆ ಗಂಡನ ಜೊತೆಗೆ ನನ್ನ ಸಂಸಾರ ಉಳಿಸಿಕೊಳ್ಳಲು ನನ್ನ ಕಿಡ್ನಿ ದಾನ ಮಾಡುತ್ತೇನೆ.