ಕಾರವಾರ (ಉತ್ತರ ಕನ್ನಡ) : ಸಾಮಾನ್ಯವಾಗಿ ಕಂದು ಬಣ್ಣದ ಹೆಬ್ಬಾವುಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಆದರೆ ಕುಮಟಾದಲ್ಲಿ 2ನೇ ಬಾರಿಗೆ ಬಿಳಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಭಾರತದಲ್ಲಿ ಈವರೆಗೆ ಸಿಕ್ಕ ಬಿಳಿ ಹೆಬ್ಬಾವಿನ ಪೈಕಿ ಇದು ಅತಿ ದೊಡ್ಡದೆಂದು ಉರಗ ತಜ್ಞರು ಹೇಳುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬವರ ಮನೆಯ ಅಂಗಳದಲ್ಲಿ ಮಂಗಳವಾರ ಈ ಬಿಳಿ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಶುಭ್ರ ಬಿಳಿ ಬಣ್ಣದ ಹಾವು ಕಂಡು ಆತಂಕಗೊಂಡ ಮನೆಯವರು ತಕ್ಷಣವೇ ಮನೆ ಸಮೀಪದ ಹೋಮ್ ಗಾರ್ಡ್ ಗಣೇಶ ಮುಕ್ರಿ ಮೂಲಕ ಉರಗ ತಜ್ಞ ಪವನ್ ನಾಯ್ಕರನ್ನು ಸಂಪರ್ಕಿಸಿದ್ದರು. ರಾತ್ರಿ 12 ಗಂಟೆಯ ವೇಳೆ ಸ್ಥಳಕ್ಕಾಗಮಿಸಿದ ಅವರು, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು.
ಕಳೆದ ವರ್ಷವೂ ಮಿರ್ಜಾನ್ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿ ವೇಳೆ ಪವನ್ ನಾಯ್ಕ ರಕ್ಷಣೆ ಮಾಡಿದ್ದರು. ಈ ಹೆಬ್ಬಾವಿನ ಮೈಬಣ್ಣ ಬಿಳಿಯಾಗಿರುವುದು ಸಾಕಷ್ಟು ಸುದ್ದಿಯಾಗಿ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು. ಇದೀಗ ಕಳೆದ ವರ್ಷ ಸಿಕ್ಕ ಹೆಬ್ಬಾವಿಗಿಂತಲೂ 3 ಪಟ್ಟು ದೊಡ್ಡದಾದ ಹೆಬ್ಬಾವು ಹೆಗಡೆಯಲ್ಲಿ ಪತ್ತೆಯಾಗಿದೆ.
"ಇದು ಸಾಮಾನ್ಯ ಹೆಬ್ಬಾವಿನ ಜಾತಿಗೆ ಸೇರಿದೆ. ಚರ್ಮಕ್ಕೆ ಬಣ್ಣ ನೀಡುವ ವರ್ಣದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ನ ಕೊರತೆಯಿಂದ ಬಿಳಿ ಬಣ್ಣ ಹೊಂದಿದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಕೂಡಾ ಕೆಂಪು ಮಿಶ್ರಿತ ಬಿಳಿ ಬಣ್ಣದಲ್ಲೇ ಇರಬೇಕಾಗುತ್ತದೆ".