ಕಾರವಾರ:ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ಡಿ.9ರ ಸೋಮವಾರ ಬೆಳಗ್ಗೆ 8ಗಂಟೆಯಿಂದ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಸುತ್ತಮುತ್ತಲೂ ಮೂರು ಸುತ್ತಿನ ಭದ್ರತೆ ವ್ಯವಸ್ಥೆಯಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಚುನಾವಣಾಧಿಕಾರಿ ನೀಡಿರುವ ಪ್ರವೇಶ ಪತ್ರಗಳನ್ನು ಹೊಂದಿದವರಿಗೆ ಅಂದರೆ ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟರಿಗೆ ಮಾತ್ರ ಎಣಿಕೆ ಕೇಂದ್ರದ ನಿರ್ದಿಷ್ಟ ಪ್ರದೇಶಗಳಿಗೆ ಪ್ರವೇಶವಿದೆ. ಉಳಿದಂತೆ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್, ಗುಟ್ಕಾ ಅಥವಾ ಬೀಡಾ ಜಗಿಯುವುದು ಅಥವಾ ಡಿಜಿಟಲ್ ಉಪಕರಣ ಹೊಂದುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು 14 ಎಣಿಕೆ ಮೇಜುಗಳನ್ನು ವ್ಯವಸ್ಥೆ ಮಾಡಲಾಗಿದ್ದು ಪ್ರತಿ ಮೇಜಿನಲ್ಲಿ ಒಬ್ಬ ಮೇಲ್ವಿಚಾರಕ, ಹೆಚ್ಚುವರಿ ಎಣಿಕೆ ಸಿಬ್ಬಂದಿ, ಎಣಿಕೆ ಸಹಾಯಕ ಹಾಗೂ ಒಬ್ಬ ಸಹಾಯಕ ಇರಲಿದ್ದಾರೆ. ಅಂದಾಜು 17 ಸುತ್ತುಗಳ ಎಣಿಕೆ ನಡೆಯಲಿದೆ. ಆಯ್ಕೆಯ ಐದು ಮತದಾನ ಖಾತ್ರಿಗಳ ಯಂತ್ರ ಎಣಿಕೆ ಹಾಗೂ ಅಂಚೆ ಮತಗಳ ಎಣಿಕೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ ಎಂದರು. ಸಕಾಲಕ್ಕೆ ಸಾರ್ವಜನಿಕರಿಗೆ ಮತ ಎಣಿಕೆಯ ಕ್ಷಣ ಕ್ಷಣದ ಸುದ್ದಿಗಳನ್ನು ನೀಡುವ ಸಲುವಾಗಿ ವಿಶೇಷ ಮತ್ತು ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು ಟಿವಿ, ಇಂಟರ್ನೆಟ್ ಸೌಲಭ್ಯ, ದೂರವಾಣಿ ಸೇರಿದಂತೆ ಸಂಪರ್ಕ ಮಾಧ್ಯಮಕ್ಕೆ ವಿಶೇಷ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮತ ಎಣಿಕೆ ಕೇಂದ್ರದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸಿಸಿಟಿವಿ ಮೂಲಕ ದಾಖಲಿಸಲಾಗುತ್ತಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ನಿಗಾ ವಹಿಸಲಾಗಿದೆ. ಈಗಾಗಲೇ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಿದ್ದು ಭಾನುವಾರ ಎರಡನೇ ಸುತ್ತಿನ ತರಬೇತಿ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮತ ಕ್ಷೇತ್ರದಾದ್ಯಂತ ಮತ ಎಣಿಕೆ ದಿನ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಲಾಗಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಳನ್ನು ಭಾರತ ಚುನಾವಣಾ ಆಯೋಗದ ವೆಬ್ಸೈಟ್ http://results.eci.gov.in ನಲ್ಲಿ ಸಾರ್ವಜನಿಕರು ನೋಡಬಹುದಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿದರು.