ಕಾರವಾರ: ಕದ್ರಾ ಜಲಾಶಯದಿಂದ ಕಾಳಿ ನದಿಗೆ ನಿರಂತರವಾಗಿ ಹೆಚ್ಚುವರಿ ನೀರನ್ನು ಹರಿಬಿಡುತ್ತಿರುವ ಪರಿಣಾಮ ನದಿ ಪಾತ್ರದ ಗ್ರಾಮಗಳು ಜಲಾವೃತಗೊಳ್ಳತೊಡಗಿವೆ.
ಕದ್ರಾ ಜಲಾಶಯದಿಂದ ಮೂರನೇ ದಿನವೂ ನೀರು ಹೊರಕ್ಕೆ: ಜಲಾವೃತಗೊಂಡ ಕಾಳಿ ನದಿಪಾತ್ರದ ಗ್ರಾಮಗಳು - ಕಾರವಾರ ಕಾಳಿ ನದಿ
ಉತ್ತರ ಕನ್ನಡದಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಹರಿಬಿಡಲಾಗಿದೆ. ಈಗಾಗಲೇ ಕದ್ರಾ ಜಲಾಶಯದ ಏಳು ಗೇಟ್ಗಳನ್ನು ತೆರೆದು ನೀರು ಹರಿಸಲಾಗಿದ್ದು, ನದಿ ಪಾತ್ರದ ಜನರು ಸಂಕಷ್ಟ ಎದುರಿಸುವಂತಾಗಿದೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆ, ಕಾರವಾರದ ಕದ್ರಾ ಜಲಾಶಯಯದಿಂದ ಕಳೆದ ಮೂರು ದಿನಗಳಿಂದ ನಿರಂತರವಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ನಿನ್ನೆ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ಇಂದೂ ಸಹ ನೀರಿನ ಹರಿವು ಹೆಚ್ಚಾದ ಹಿನ್ನೆಲೆ, ಹತ್ತು ಗೇಟ್ಗಳ ಪೈಕಿ, ಏಳು ಗೇಟ್ಗಳ ಮೂಲಕ ಕಾಳಿ ನದಿಗೆ 65ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಕದ್ರಾ ಜಲಾಶಯದ ಕೆಳದಂಡೆಯಲ್ಲಿರುವ ಹಿಂದುವಾಡಾ ಸೇರಿ ವಿವಿಧ ಮಜಿರೆಗಳು ಜಲಾವೃತ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಕಳೆದ ವರ್ಷ ಎರಡು ತಿಂಗಳುಗಳ ಕಾಲ ಪ್ರವಾಹ ಸೃಷ್ಟಿಯಾಗಿ ತೊಂದರೆಯಾದ ಪ್ರದೇಶಗಳಲ್ಲಿಯೇ ಈ ಭಾರಿಯೂ ಹಾನಿಯಾಗಿದ್ದು, ಜನ ಆತಂಕಿತರಾಗಿದ್ದಾರೆ.