ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಮಳೆಯಾಗದ ಕಾರಣ ನೂರಾರು ಗ್ರಾಮಗಳಲ್ಲಿ ನೀರಿಗೆ ಕೊರತೆ ಸೃಷ್ಟಿಯಾಗಿದೆ. ಈ ನಡುವೆ ಭಟ್ಕಳದಲ್ಲಿಯೂ ಪಾತಾಳ ಕಂಡಿರುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಜನರ ದಾಹ ತೀರಿಸಲು ಕೆಲವು ಸಂಘ ಸಂಸ್ಥೆಗಳು ಜಾತಿ ಧರ್ಮ ಮರೆತು ಎಲ್ಲರಿಗೂ ಉಚಿತವಾಗಿ ನೀರು ಪೂರೈಸುವ ಮೂಲಕ ಕೋಮು ಸಾಮರಸ್ಯ ಮೆರೆಯುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಂಗಳಿಂದಲೇ ಕುಡಿಯುವ ನೀರಿನ ಕೊರತೆ ಮುಂದುವರಿದಿದ್ದು ಜನ ನೀರಿಗಾಗಿ ಕಿ.ಮೀ ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಭಟ್ಕಳದ ಕೆಲವೆಡೆ ಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ನಲ್ಲಿಗಳಿಗೂ ಸರಿಯಾಗಿ ನೀರು ಸರಬರಾಜು ಆಗದೆ ಇರುವುದರಿಂದ ಜನ ಪರಿತಪಿಸುತ್ತಿದ್ದಾರೆ. ಆದರೆ, ನೀರಿನ ಸಮಸ್ಯೆ ನಿತ್ಯವೂ ಹೆಚ್ಚಾಗುತ್ತಿರುವುದನ್ನು ಅರಿತ ಸ್ಥಳೀಯ ಆಡಳಿತದ ಜೊತೆಗೆ ತಜೀಂ ಸಂಸ್ಥೆ ಸೇರಿದಂತೆ ಕೆಲ ಕ್ರೀಡಾ ಸಂಘಟನೆಗಳು ನೀರು ಪೂರೈಕೆಗೆ ಮುಂದೆ ಬಂದಿವೆ.
ಈ ಸಂಘಟನೆಗಳ ಮೂಲಕ ಪ್ರತಿನಿತ್ಯ ಅಗತ್ಯವಿರುವ ಮನೆಗಳಿಗೆ 200 ಲೀಟರ್ ನೀರು ಪೂರೈಕೆ ಮಾಡುತ್ತಿವೆ. ಕಳೆದೆರಡು ತಿಂಗಳಿಂದ ಇಲ್ಲಿನ ಲಬೈಕ್ ನವಾಯತ್, ಭಟ್ಕಳ ಮುಸ್ಲಿಂ ಯುಥ್ ಫೆಡರೇಶನ್ ಸೇರಿದಂತೆ ವಿವಿಧ ಸಂಘದ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಿಗದಿತ ಏರಿಯಾವನ್ನು ಗುರುತು ಮಾಡಿಕೊಂಡು ಚಾಚು ತಪ್ಪದೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ಭಟ್ಕಳ ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಿದಂತಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.