ಕಾರವಾರ (ಉತ್ತರ ಕನ್ನಡ) : ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಉತ್ತರಕನ್ನಡದಲ್ಲಿ ಇಲ್ಲಿನ ಕಡಲತೀರಗಳು ಕೂಡ ಅಷ್ಟೇ ಆಕರ್ಷಣೀಯವಾಗಿವೆ. ಈ ಕಡಲುಗಳಲ್ಲಿ ಜಲಸಾಹಸದಂತಹ ಚಟುವಟಿಕೆಗಳಿಗೆ ವಿಫುಲ ಅವಕಾಶಗಳಿದ್ದರೂ ಕಳೆದ ಕೆಲ ವರ್ಷಗಳಿಂದ ಸೂಕ್ತ ವ್ಯವಸ್ಥೆಗಳಿಲ್ಲದೆ ಚಟುವಟಿಕೆಗಳು ಬಂದ್ ಆಗಿದ್ದವು. ಆದರೆ ಇದೀಗ ಕಾರವಾರದ ಕಾಳಿ ಸಂಗಮದ ಪ್ರದೇಶದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿ(ಜತ್ನಾ)ಯಿಂದ ಜಲಸಾಹಸ ಚಟುವಟಿಕೆ ಪುನಃ ಆರಂಭಗೊಂಡಿದ್ದು, ಕ್ರೀಡಾಸಕ್ತರಲ್ಲಿ ಹೊಸ ಭರವಸೆ ಮೂಡುವಂತಾಗಿದೆ.
ಉತ್ತರಕನ್ನಡ ಹೇಳಿಕೇಳಿ ಪ್ರವಾಸೋದ್ಯಮದ ಮೂಲಕವೇ ಗುರುತಿಸಿಕೊಂಡಿರುವ ಜಿಲ್ಲೆ. ದೇಶ ವಿದೇಶಿ ಪ್ರವಾಸಿಗರು ನಿತ್ಯವೂ ಭೇಟಿ ನೀಡಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯುವುದರ ಜೊತೆಗೆ ಕರಾವಳಿ ತೀರದತ್ತವೂ ಹೆಚ್ಚು ಆಕರ್ಷಿತರಾಗುತ್ತಾರೆ. ಇದೇ ಕಾರಣಕ್ಕೆ ಉತ್ತರಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಕಳೆದ ಕೆಲ ವರ್ಷಗಳಿಂದ ಜಲಸಾಹಸ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿತ್ತು. ಹೊರ ರಾಜ್ಯಗಳಿಂದ ತರಬೇತಿ ಪಡೆದ ಕೆಲವರು ಜಿಲ್ಲೆಯ ವಿವಿಧೆಡೆ ಹತ್ತಾರು ಜಲಸಾಹಸ ಚಟುವಟಿಕೆಗಳನ್ನು ಪ್ರಾರಂಭಿಸಿ ಪ್ರವಾಸಿಗರಿಗೆ ಸೇವೆ ಒದಗಿಸಿದ್ದರು.
ಈ ಹಿಂದೆ ಇಂತಹವರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಆರಂಭಿಸಿದ್ದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿ ಸೂಕ್ತ ವ್ಯವಸ್ಥೆಗಳಿಲ್ಲದೆ ತರಬೇತಿ ಬಂದ್ ಆಗಿತ್ತು. ಆದರೆ, ಮತ್ತೆ ಸದಾಶಿವಗಡದ ಕಾಳಿ ನದಿ ದಂಡೆ ಮೇಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿಯಿಂದ ಜಲಸಾಹಸಿ ಚಟುವಟಿಕೆಗಳ ಶಿಬಿರ ಆರಂಭಗೊಂಡಿದೆ. 10 ದಿನದ ಈ ಬೇಸಿಗೆ ಶಿಬಿರದಲ್ಲಿ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಭಾಗಗಳಿಂದ ಒಟ್ಟು 30 ಮಂದಿ ಯುವಕ ಯುವತಿಯರು ಪಾಲ್ಗೊಂಡಿದ್ದಾರೆ. ನವೆಂಬರ್ 18 ರಿಂದ ಮತ್ತೊಂದು ಶಿಬಿರ ಇಲ್ಲಿಯೇ ನಡೆಯಲಿದೆ ಎಂದು ತರಬೇತುದಾರ ಪ್ರಕಾಶ ಹರಿಕಂತ್ರ ಮಾಹಿತಿ ನೀಡಿದರು.