ಕಾರವಾರ: ವಂದೇ ಭಾರತ್ ರೈಲು ಸ್ವಾಗತ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಬೆಂಬಲಿಗರು ಕಿತ್ತಾಡಿಕೊಂಡ ಘಟನೆ ಶನಿವಾರ ನಡೆಯಿತು. ಕಾರ್ಯಕ್ರಮಕ್ಕೆ ರೂಪಾಲಿ ನಾಯ್ಕ ಆಗಮಿಸಿದ್ದ ವೇಳೆ ಕಾರ್ಯಕರ್ತರು ಅರ್ಧ ಗಂಟೆಗೂ ಹೆಚ್ಚು ಕಾಲ ಘೋಷಣೆಗಳನ್ನು ಕೂಗಿದರು. ಬಳಿಕ ಶಾಸಕ ಸತೀಶ್ ಸೈಲ್ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಸ್ಥಳದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಅಧಿಕಾರಿಗಳು ರಾಜಕೀಯ ಮಾಡದಂತೆ ಮುಖಂಡರಿಗೆ ಮನವಿ ಮಾಡಿದರಾದರೂ ಪ್ರಯೋಜನವಾಗದ ಕಾರಣ ಕಾರ್ಯಕ್ರಮ ಅರ್ಧದಲ್ಲಿಯೇ ಸ್ಥಗಿತಗೊಂಡಿತು.
ಕಾರ್ಯಕರ್ತರಿಗೆ ಜಿ.ಪಂ ಸಿಇಒ ಈಶ್ವರಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದರೂ ಫಲ ನೀಡಲಿಲ್ಲ. ಇಬ್ಬರು ನಾಯಕರು ಬೆಂಬಲಿಗರೊಂದಿಗೆ ರೈಲು ಹತ್ತಿ ಪ್ರಯಾಣಿಕರಿಗೆ ಶುಭ ಕೋರಿದರು. ಈ ವೇಳೆಯೂ ಬೆಂಬಲಿಗರ ಘೋಷಣೆ ಮುಂದುವರೆದಿದ್ದರಿಂದ ಪ್ರಯಾಣಿಕರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು ವಾಪಸ್ ತೆರಳುವಂತಾಯಿತು.
ಬಳಿಕ ಮಾತನಾಡಿದ ಶಾಸಕ ಸತೀಶ್ ಸೈಲ್, "ಬಿಜೆಪಿಯವರು ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಶಾಲು ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆ ಜಾರಿಗೊಳಿಸಿದ್ದಾರೆ. ಇದಕ್ಕೆ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ. ಬಿಜೆಪಿಗರು ಈ ರೀತಿ ರಾಜಕೀಯ ಮಾಡುವ ಬದಲು ಕೊಂಕಣ ರೈಲ್ವೆ ನಿರಾಶ್ರಿತರಿಗೆ 30 ವರ್ಷದಿಂದ ಪರಿಹಾರ ಬಂದಿಲ್ಲ, ಅದನ್ನು ಕೊಡಿಸಲು ಪ್ರಯತ್ನಿಸಲಿ. ಅಲ್ಲದೇ, ಮುರುಡೇಶ್ವರದವರೆಗೆ ಮಾತ್ರ ಬರುವ ರೈಲನ್ನು ಕಾರವಾರದವರೆಗೆ ತರಲು ಪ್ರಯತ್ನಿಸಬೇಕು" ಎಂದು ಆಗ್ರಹಿಸಿದರು.
ಸಂಸದ ಅನಂತಕುಮಾರ್ ಹೆಗಡೆ ಗೈರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕಾರವಾರದಲ್ಲಿ ಚಾಲನೆ ನೀಡಬೇಕಿದ್ದ ಸಂಸದ ಅನಂತಕುಮಾರ್ ಹೆಗಡೆ ಗೈರಾಗಿದ್ದರು. ಅವರು ಬೇರೊಂದು ಕಾರ್ಯಕ್ರಮವಿದ್ದ ಕಾರಣಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸ್ಥಳೀಯ ಹಾಲಿ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದಕ್ಕೂ ಮುನ್ನ ಅವರು ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಿಹಿ ವಿತರಿಸಿ ಶುಭ ಕೋರಿದರು. ಅಲ್ಲದೆ, ಮಂಗಳೂರಿನಿಂದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ರೈಲಿನಲ್ಲಿಯೇ ಪಕ್ಷದ ಕಾರ್ಯಕರ್ತರು, ಪ್ರಯಾಣಿಕರೊಂದಿಗೆ ಸಂಚರಿಸಿದರು. ರೈಲು ಗೋವಾಕ್ಕೆ ಸಂಚರಿಸಿತು.