ಕಾರವಾರ: ಹಲವು ಉದ್ದೇಶಿತ ಯೋಜನೆಗಳಿಗೆ ದೇಣಿಗೆ ಸಂಗ್ರಹಿಸುವ ಸಂಬಂಧ ನಗರದಲ್ಲಿ ಇಂದು ರೋಟರಿ ಕ್ಲಬ್ ವತಿಯಿಂದ ವಾಕಥಾನ್ 2020 ಕಾರ್ಯಕ್ರಮ ನಡೆಯಿತು.
ನಗರದ ಮಾಲಾದೇವಿ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 675 ಸ್ಪರ್ಧಾಳುಗಳು ಭಾಗವಹಿಸಿದ್ದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಸ್ಫರ್ಧೆ ಏರ್ಪಡಿಸಲಾಗಿತ್ತು.
ಮಾಲಾದೇವಿ ಮೈದಾನದಿಂದ ನಂದನಗದ್ದಾ, ಹಬ್ಬುವಾಡ ಹಾಗೂ ಸವಿತಾ ವೃತ್ತದ ಮೂಲಕ ವಾಪಾಸ್ ಮಾಲಾದೇವಿ ಮೈದಾನಕ್ಕೆ ಕ್ರಮಿಸಬೇಕು. ಒಟ್ಟು 10 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಎಲ್ಲ ಸ್ಪರ್ಧಾಳುಗಳು ಉತ್ಸಾಹದಿಂದ ಭಾಗವಹಿಸಿದರು. ಕ್ರೀಡಾಪಟು ಪ್ರಮೋದ ನಾಯ್ಕ ಹಾಗೂ ಪತ್ರಕರ್ತ ಗಂಗಾಧರ ಹಿರೇಗುತ್ತಿ ಚಾಲನೆ ನೀಡಿದರು.
ಹಿರಿಯ ನಾಗರಿಕರ ಮಹಿಳಾ ವಿಭಾಗದಲ್ಲಿ ಶಿವಮ್ಮ ನಾಯಕ ಪ್ರಥಮ, ಶುಭಶ್ರೀ ದೇಸಾಯಿ ದ್ವಿತೀಯ, ಪುರುಷರ ವಿಭಾಗದಲ್ಲಿ ಉದಯ ನಾಯ್ಕ ಪ್ರಥಮ, ಡಿ.ಜೆ. ನಾಯ್ಕ ದ್ವೀತಿಯ ಸ್ಥಾನ ಪಡೆದರು. ಯುವಕರಲ್ಲಿ ನೀಲನ ಗೌಡ, ಯುವತಿಯರಲ್ಲಿ ದೀಪಾಲಿ ನಾಯ್ಕ ಮೊದಲಿಗರಾದರು. ಇತರ ವಿಭಾಗಗಳಲ್ಲಿ ಮಕ್ಕಳು ಹಾಗೂ ಯುವಕರು ಗೆದ್ದು ಬೀಗಿದರು.
ಉಚಿತವಾಗಿ ಕೈಕಾಲು ಜೋಡಣಾ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಬೃಹತ್ ಉದ್ಯೋಗ ಮೇಳ, ತರಬೇತಿ ಕಾರ್ಯಗಾರ ಒಳಗೊಂಡ 10ಯೋಜನೆಗಳನ್ನು ಅನುಷ್ಠಾನಗೊಳಿಸಲು ರೋಟರಿ ಪಶ್ಚಿಮ ಘಟಕ ಯೋಜನೆ ರೂಪಿಸಿದೆ. ಈ ಕಾರಣದಿಂದ ವಾಕಥಾನ್ ಮೂಲಕ ದೇಣಿಗೆ ಸಂಗ್ರಹಿಸುವ ಪ್ರಯತ್ನ ನಡೆಸಿದರು ಎಂದು ಸಂಘಟಕರು ತಿಳಿಸಿದರು.