ಕಾರವಾರ:ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಇಂದು ಮತದಾನ ನಡೆಯಲಿದ್ದು, ಜಿಲ್ಲೆಯ 23 ಸ್ಥಳದ 26 ಮತಗಟ್ಟೆಗಳಲ್ಲಿ ಕೋವಿಡ್-19 ಮುಂಜಾಗ್ರತೆಯೊಂದಿಗೆ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್, ಆಕ್ಸಿಮೀಟರ್ ವ್ಯವಸ್ಥೆ ಮಾಡುವುದರೊಂದಿಗೆ ಕೋವಿಡ್-19 ಶಂಕಿತರನ್ನು ಗುರುತಿಸಲು ಮತ್ತು ಅಂತವರು ಮತ ಚಲಾಯಿಸಲು ಅನುಕೂಲವಾಗಲೆಂದು ಆರೋಗ್ಯ ಇಲಾಖೆಯಿಂದ ಪ್ರತಿ ಮತಗಟ್ಟೆಯಲ್ಲಿ ಸೆಕ್ಟರ್ ಹೆಲ್ತ್ ರೆಗ್ಯೂಲೇಟರ್ ನೇಮಿಸಲಾಗಿದೆ. ಅಲ್ಲದೆ ಕೋವಿಡ್ ಶಂಕಿತರಿಗೆ ಸಂಜೆ 4 ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.
ಸುಗಮ ಮತದಾನಕ್ಕಾಗಿ 26 ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳುವುದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿರುತ್ತದೆ. ಮತದಾರರಿಗೆ ಮಾಸ್ಕ್ ಹಾಗೂ ಪ್ರತ್ಯೇಕ ನೇರಳೆ ಬಣ್ಣದ ಸ್ಕೆಚ್ ಪೆನ್ ಹಾಗೂ ಬ್ಯಾಲೆಟ್ ಪೇಪರ್ ನೀಡಲಾಗುವುದು.
ಮತದಾರರು ಚುನಾವಣಾ ಸಿಬ್ಬಂದಿ ನೀಡಿದಂತಹ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಿ, ಇಂಗ್ಲಿಷ್, ರೋಮನ್ ಅಥವಾ ಕನ್ನಡ ಅಂಕಿಗಳನ್ನು ನಮೂದಿಸುವುದರ ಮೂಲಕ ಮಾತ್ರ ಮತ ಚಲಾಯಿಸಬೇಕು. ಅಂಕಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಚಿಹ್ನೆ ಅಥವಾ ಅಕ್ಷರ ಬರವಣಿಗೆಯಲ್ಲಿ ಮತ ಚಲಾಯಿಸುವ ಹಾಗೆ ಇರುವುದಿಲ್ಲವೆಂದು ಹೇಳಿದರು.
ಮತದಾನ ನಡೆಯುವ ಸ್ಥಳಗಳು:
ಅಂಕೋಲಾ ತಹಶೀಲ್ದಾರ ಕಚೇರಿ, ಭಟ್ಕಳ ತಹಶೀಲ್ದಾರ ಕಚೇರಿ, ಅಂಬಿಕಾ ನಗರದ ಕೆಹೆಚ್‍ಇಪಿ ಹೈಸ್ಕೂಲ್, ದಾಂಡೇಲಿಯ ನಗರಸಭೆ ಕಟ್ಟಡದ ಕೆಳಮಹಡಿಯ ಬಲಭಾಗ, ಹಳಿಯಾಳ ತಹಶೀಲ್ದಾರ ಕಚೇರಿ ರೂಮ್ ನಂ:1, ಹೊನ್ನಾವರದ ತಹಶೀಲ್ದಾರ ಕಚೇರಿಯ ಬಲ ಮತ್ತು ಎಡಭಾಗ, ಹೇರಗಂಡಿ ಗ್ರಾಮ ಪಂಚಾಯತ್, ರಾಮನಗರ ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಜೋಯಿಡಾದ ತಹಶೀಲ್ದಾರ ಕಚೇರಿಯ ಚುನಾವಣಾ ವಿಭಾಗದ ಕೊಠಡಿಯ ಎಡಭಾಗ, ಕುರ್ಣಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ, ಕಾರವಾರ ನಗರದಲ್ಲಿ ಸೇಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲ್‍ನ 7ನೇ ತರಗತಿಯ ‘ಎ’ ಕೊಠಡಿಯ ಪೂರ್ವ ಭಾಗ ಹಾಗೂ 7ನೇ ತರಗತಿಯ ‘ಬಿ’ ಕೊಠಡಿಯ ಮಧ್ಯ ಭಾಗ, ಗೋಕರ್ಣದ ಹೊಸ ನಾಡ ಕಚೇರಿ ಸಭಾಂಗಣ, ಕುಮಟಾ ತಹಶೀಲ್ದಾರ ಕಚೇರಿಯ ಬಲಭಾಗ ಮತ್ತು ಎಡಭಾಗ, ಮುಂಡಗೋಡ ತಹಶೀಲ್ದಾರ್ ಕಚೇರಿಯ ಎಡಭಾಗ, ಸಿದ್ದಾಪುರ ತಹಶೀಲ್ದಾರ್ ಕಚೇರಿಯ ಪೂರ್ವ ಭಾಗದಲ್ಲಿ, ಹೇರೂರಿನ ನಾಡ ಕಚೇರಿ ಸೇರಿದಂತೆ 26 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.