ಕಾರವಾರ: ಕಡಲತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಜಲಚರಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ. ಜೊತೆಗೆ ಕಸದ ರಾಶಿ ಕಡಲತೀರಗಳಲ್ಲಿ ಹೆಚ್ಚಾಗುತ್ತಿದೆ. ಈ ವರ್ಷ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ ಕಡಲತೀರಗಳ ಸ್ವಚ್ಛತೆಗೆ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾಲಿನ್ಯಕಾರಕ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯದ ಬಗೆಗೆ ಜನರಿಗೆ ಜಾಗೃತಿ ಮೂಡಿಸಿಸುವುದರ ಜೊತೆಗೆ ಮಾಲಿನ್ಯ ತಡೆಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಏಕಕಾಲಕ್ಕೆ ಕಡಲತೀರ ಸ್ವಚ್ಛತಾ ಬೃಹತ್ ಅಭಿಯಾನ ನಡೆಯುತ್ತಿದ್ದು, ಇಂದು ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅರಣ್ಯ ಇಲಾಖೆ, ನೆಹರೂ ಯುವ ಕೇಂದ್ರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಈ ವೇಳೆ ಸ್ವಯಂ ಸೇವಕರು ಕಡಲ ಪರಿಸರವನ್ನು ಸ್ವಚ್ಛವಾಗಿಡುವ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಸ್ವಚ್ಛತಾ ಅಭಿಯಾನದ ಕುರಿತು ಡಿಎಫ್ಓ ಪ್ರಶಾಂತ್ ಕುಮಾರ್ ಕೆ. ಸಿ ಮಾತನಾಡಿ, ಭಾರತ ಜಿ20 ಶೃಂಗಸಭೆ ನೇತೃತ್ವ ವಹಿಸಿದ ಕಾರಣ ಇದರಡಿ ದೇಶದಾದ್ಯಂತ ಕರಾವಳಿ ಪ್ರದೇಶಗಳ ಪ್ರಮುಖ ಕಡಲತೀರಗಳಲ್ಲಿ ಸ್ವಚ್ಚತೆ ನಡೆಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಸಾಕಷ್ಟು ಮಾಲಿನ್ಯವಾಗುತ್ತಿದೆ. 3.5 ಮಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯ ಪ್ರತಿವರ್ಷ ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಹೆಚ್ಚಿನ ಪ್ಲಾಸ್ಟಿಕ್ ಸಮುದ್ರ ಸೇರುತ್ತಿರುವ ಕಾರಣ ಜಲಚರ ಜೀವಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಕಡಲಜೀವಿಗಳು ಸಾಯುತ್ತಿರುವ ಉದಾಹರಣೆಗಳು ನಮ್ಮ ಜಿಲ್ಲೆಯಲ್ಲಿ ನಡೆದಿದೆ. ಈ ಕಾರಣದಿಂದ ಪ್ಲಾಸ್ಟಿಕ್ ನಿಂದ ದೂರ ಇದ್ದು, ಮಾಲಿನ್ಯ ತಡಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.