ಕಾರವಾರ: ಪಾಕಿಸ್ತಾನಿ ಮಹಿಳೆಯ ವಿವಾಹವಾಗಿ ಭಾರತಕ್ಕೆ ಕರೆ ತಂದು ವೀಸಾ ನಿಯಮ ಉಲ್ಲಂಘನೆ ಮಾಡಿದ ಭಟ್ಕಳದ ಪತಿ ಹಾಗೂ ಪಾಕಿಸ್ತಾನ ಮೂಲದ ಆತನ ಪತ್ನಿಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿಯಾದ ಮಹ್ಮದ್ ಇಲಿಯಾಸ್ ಹಾಗೂ ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.
ಮಹ್ಮದ್ ಇಲಿಯಾಸ್ 2014ರ ಜೂನ್ 17ರಂದು ಸ್ಥಳೀಯ ಭಟ್ಕಳ ಪೊಲೀಸ್ ಠಾಣೆಗೆ ಹಾಗೂ ಕಾರವಾರದ ಎಫ್ಆರ್ಓ ಅವರಿಗೆ ಮಾಹಿತಿ ನೀಡದೇ ಪಾಕಿಸ್ತಾನಿ ಪ್ರಜೆಯಾದ ತನ್ನ ಪತ್ನಿಯನ್ನು ವೀಸಾ ವಿಸ್ತರಣೆಯ ಕುರಿತು ಭಟ್ಕಳದಿಂದ ದೆಹಲಿಗೆ ಕರೆದುಕೊಂಡು ಹೋಗಿ, ವಿದೇಶಿ ಕಾಯ್ದೆಯಂತೆ ವಿಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಭಟ್ಕಳ ನಗರ ಠಾಣೆಯ ಪಿಐ ಪ್ರಶಾಂತ ನಾಯಕ ಅವರು ಈ ಕುರಿತು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.