ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಏಕಾಏಕಿ ಸರ್ವೇ ಕಾರ್ಯಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹುರುಳಿಸಾಲ ಗ್ರಾಮದ ಸರ್ವೇ ನಂ 105, 106, 107ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ವೇಗೆ ಮುಂದ್ದಾಗಿದ್ದಾರೆ. ಆದರೆ ತಮ್ಮನ್ನು ತೆರವುಗೊಳಿಸಲು ಕಂದಾಯ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ. ಸರ್ವೇಯ ಉದ್ದೇಶವನ್ನು ಹೇಳದೆ ಸರ್ವೇ ನಡೆಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಕಳೆದ 25-30 ವರ್ಷಗಳಿಂದ ಇಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದು, ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಸರ್ಕಾರವೇ ನಮಗೆ ವಿದ್ಯುತ್ ಸಂಪರ್ಕ, ನೀರು ಎಲ್ಲವನ್ನೂ ಕೊಟ್ಟಿದೆ. ಅಲ್ಲದೇ ಸರ್ಕಾರ ಈ ಭಾಗದಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿದೆ. ಜನಪ್ರತಿನಿಧಿಗಳು ಅಕ್ರಮ ಸಕ್ರಮದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಆದರೆ ನಮಗೆ ಯಾವುದೇ ನೋಟಿಸ್ ನೀಡದೇ, ಏಕಾಏಕಿಯಾಗಿ ಸರ್ವೇ ನಡೆಸುವುದು ಏಕೆ?. ತಹಶಿಲ್ದಾರರು ಸ್ಥಳಕ್ಕೆ ಬಂದು ನಮ್ಮ ಮನವಿಯನ್ನು ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಯಿಸಿ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರೆಸಿದ್ದಾರೆ.