ಕಾರವಾರ: ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮತಯಾಚನೆಗೆ ತೆರಳಿದಾಗ ಗ್ರಾಮಸ್ಥರು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡಿರುವ ಘಟನೆ ಶಿರಸಿ ತಾಲೂಕಿನ ಅಜ್ಜರಣಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಪ್ರಚಾರದ ವೇಳೆ ಹೆಬ್ಬಾರ್ಗೆ ಗ್ರಾಮಸ್ಥರ ಮುತ್ತಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಶಿವರಾಮ್ ಹೆಬ್ಬಾರ್ ಪ್ರಚಾರಕ್ಕೆ ತೆರಳಿದಾಗ ಅಜ್ಜರಣಿ ಗ್ರಾಮಸ್ಥರು ಮುತ್ತಿಗೆ ಹಾಕಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಿಂದ ಬಂದು ಮತ ನೀಡುವಂತೆ ಕೇಳಿದ್ರಿ. ಇದೀಗ ಬಿಜೆಪಿಗೆ ಸೇರಿ ಮತ ನೀಡುವಂತೆ ಕೇಳುತ್ತಿದ್ದೀರಾ. ನೀವು ಜನರಿಗೆ ಮೋಸ ಮಾಡಿದಂತಾಗಿದೆ. ಹಿಂದೆ ಬಿಜೆಪಿಗರ ವಿರುದ್ಧ ಮಾತನಾಡಿದ್ದೀರಿ. ಆ ಮಾತನ್ನು ಉಳಿಸಿಕೊಳ್ಳಬೇಕಿತ್ತು. ನೀವು ಕಾಂಗ್ರೆಸ್ನಲ್ಲಿದ್ದರೇ ನಾವು ಬೆಂಬಲಿಸುತ್ತಿದ್ದೇವು. ಆದರೆ ನಿಮ್ಮ ಲಾಭಕ್ಕಾಗಿ ಬಿಜೆಪಿ ಸೇರಿದ್ದೀರಿ ಎಂದು ತೀವ್ರವಾಗಿ ತರಾಟೆ ತೆಗೆದುಕೊಂಡರು.
ಈ ವೇಳೆ ಜನರನ್ನು ಸಮಾಧಾನ ಪಡಿಸಲು ಮುಂದಾದ ಶಿವರಾಮ್ ಹೆಬ್ಬಾರ್ ಮತ ಹಾಕು ಎಂದು ಯಾರನ್ನು ಒತ್ತಾಯಿಸಲಾಗುವುದಿಲ್ಲ. ಮತ ಹಾಕುವುದು ಮತದಾರರ ಹಕ್ಕು. ಬದಲಾದ ಸನ್ನಿವೇಶದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿರುವುದಾಗಿ ತಿಳಿಸಿದರು. ಆದರೆ ಇದನ್ನು ಕೇಳದ ಜನರು ಹೆಬ್ಬಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ ಹಿನ್ನೆಲೆಯಲ್ಲಿ ಸಿಟ್ಟಾಗಿ ತೆರಳಿರುವ ಘಟನೆ ನಡೆದಿದೆ.