ಕಾಳಿನದಿ ಹಿನ್ನಿರಿನಲ್ಲಿ ಭರ್ಜರಿ ಮತ್ಸಬೇಟೆ ಮಾಡಿ ಸಂಭ್ರಮಿಸಿದ ಮೀನುಗಾರರು ಕಾರವಾರ : ಕರಾವಳಿ ಭಾಗವೆಂದರೇ ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದು ಸಾಮಾನ್ಯವಾಗಿರುತ್ತದೆ. ಕೆಲವರು ಗಾಳದ ಮೂಲಕವೂ ನದಿ ಹಾಗೂ ಸಮುದ್ರದ ದಡದಲ್ಲಿ ಮತ್ಸ್ಯ ಬೇಟೆ ಮಾಡುತ್ತಾರೆ. ಆದರೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಊರಿಗೆ ಊರೇ ಸೇರಿಕೊಂಡು ಬಹಳ ಸಂಭ್ರಮದಿಂದ ಮತ್ಸ್ಯ ಬೇಟೆ ನಡೆಸಿದ್ದಾರೆ.
ಹೌದು, ಇಲ್ಲಿನ ಬೊರಿಬಂದರ ಕತ್ರಿ ಬಳಿ ಗಿಂಡಿ ಮಹಾದೇವಿ ದೇವಸ್ಥಾನದವರು ಪ್ರತಿವರ್ಷದಂತೆ ಕಾಳಿನದಿ ಹಿನ್ನೀರಿನಲ್ಲಿ ಈ ವರ್ಷ ಕೂಡ ಮತ್ಸ್ಯಬೇಟೆಗೆ ಅವಕಾಶ ಕಲ್ಪಿಸಿದ್ದರು. ದೇವಸ್ಥಾನದ ಪ್ರದೇಶದಲ್ಲಿ ತುಂಬಿಕೊಂಡಿದ್ದ ಹಿನ್ನೀರನ್ನು ಖಾಲಿ ಮಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಬಲೆ ಹಾಗೂ ಚೀಲಗಳ ಮೂಲಕ ಮತ್ಸ್ಯ ಬೇಟೆ ನಡೆಸಿದರು.
ಕಿನ್ನರ ಗ್ರಾಮ ಪಂಚಾಯಿತಿಯಲ್ಲಿ ವಾಸವಿರುವ ಪಡ್ತಿ, ಗುನಗಿ, ಭಂಡಾರಿ, ಕೋಮಾರಪಂಥ, ದೇವಳ್ಳಿ, ಕೊಂಕಣ ಮರಾಠ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಎನ್ನದೇ ಸುತ್ತಮುತ್ತಲಿನ ಭಾಗದಿಂದ ಬಂದು ಮಹಿಳೆಯರು, ಮಕ್ಕಳು, ಹಿರಿಯರು ಮೀನು ಹಿಡಿದು ಸಂಭ್ರಮಿಸಿದರು. ಸುಮಾರು 5 ಎಕರೆ ಪ್ರದೇಶದ ಹಿನ್ನಿರಿನಲ್ಲಿ 3 ಗಂಟೆಗಳ ನಡೆದ ಮತ್ಸ್ಯ ಬೇಟೆಯಲ್ಲಿ ಜನಜಾತ್ರೆಯೇ ನಡೆದಿತ್ತು. ಎಂಡಿ, ದಾಂಡಿ, ಕಟಿಯಾಳ ಬಲೆಗಳ ಮೂಲಕ ಮೀನುಗಳನ್ನು ಗೋಚಿ ಹೀಡಿದ ಮೀನುಗಾರರು ಅದನ್ನು ಚೀಲದಲ್ಲಿ ತುಂಬಿ ಮತ್ತೆ ಮತ್ತೆ ಮೀನು ಹಿಡಿಯಲು ಮುಂದಾಗುತ್ತಿದ್ದ ದೃಶ್ಯಗಳು ಕಂಡು ಬಂತು.
ಕಿನ್ನರ ಗ್ರಾಮದಲ್ಲಿ ಅನಾದಿಕಾಲದಿಂದಲು ನಡೆದುಕೊಂಡು ಬರುತ್ತಿರುವ ಈ ಮತ್ಸ್ಯ ಬೇಟೆಯಲ್ಲಿ ಸುಮಾರು 8 ರಿಂದ 10 ಕ್ವಿಂಟಲ್ ಮೀನು ಹಿಡಿಯಲಾಗುತ್ತದೆ. ಗಿಂಡಿ ಮಹಾದೇವಿ ದೇವಸ್ಥಾನದ ವತಿಯಿಂದ ನಡೆಯುವ ಈ ಚಟುವಟಿಕೆಯಲ್ಲಿ ಊರಿನವರು ಮಾತ್ರವಲ್ಲದೇ ಪರ ಊರಿನ ಜನರು ಭಾಗಿಯಾಗುತ್ತಾರೆ. ಕಾಳಿನದಿ ಹಿನ್ನೀರಿನಲ್ಲಿ ದಸರಾ ಆರಂಭದಿಂದ ಮೇ ತಿಂಗಳ ವರೆಗೆ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ನಂತರ ಶಿವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಿನಲ್ಲಿ ಮೀನು ಬೇಟೆಗೆ ದಿನ ಗುರುತಿಸಲಾಗುತ್ತದೆ. ಅದರಂತೆ ಇಂದು ಎಲ್ಲರೂ ಸಂಭ್ರಮದಿಂದ ಭಾಗವಹಿಸಿ ಸಾಕಷ್ಟು ಮೀನು ಹಿಡಿದಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗುರುನಾಥ ಕೋಠಾರಕರ್ ಹೇಳಿದರು.
ಹಿಡಿದ ಮೀನು ಸಮಪಾಲು :ಮತ್ಸ್ಯ ಬೇಟೆಯಲ್ಲಿ ಹೀಡಿದ ಎಲ್ಲ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಹಾಗೆ ಇಲ್ಲ. ದೇವಸ್ಥಾನ ಸಮಿತಿಯವರು ನೇಮಿಸಿದ ಸದಸ್ಯರಲ್ಲಿ ತಂದು ಅಲ್ಲಿ ಅರ್ಧಪಾಲನ್ನು ನೀಡಿ ಉಳಿದ ಮೀನುಗಳನ್ನು ತೆಗೆದುಕೊಂಡ ಹೋಗಬೇಕು. ಹೀಗೆ ದೇವಸ್ಥಾನಕ್ಕೆ ಕೊಟ್ಟ ಪಾಲನ್ನು ಸಮಿತಿಯವರು ಮಾರಿ ಬಂದತಹ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇನ್ನು ಈ ಭಾರಿ ಸ್ಥಳೀಯರು ಕೂಡ ಸಾಕಷ್ಟು ಮೀನು ಬೇಟೆಯಾಡಿದ ಕಾರಣ ತಮಗೆ ಬೇಕಾದಷ್ಟನ್ನು ಇಟ್ಟುಕ್ಕೊಂಡು ಉಳಿದ್ದದ್ದನ್ನು ಮಾರಾಟಕ್ಕೆ ಇಟ್ಟು ಒಂದಿಷ್ಟು ಹಣ ಮಾಡಿಕೊಂಡರು.
ಇದನ್ನೂ ಓದಿ :ಜಿ20 ಶೃಂಗಸಭೆ ಹಿನ್ನೆಲೆ ಕಾರವಾರದ ಕಡಲತೀರ ಸ್ವಚ್ಛಗೊಳಿಸಿದ ಸ್ವಯಂ ಸೇವಕರು