ಕಾರವಾರ: ಉತ್ತರಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಕರಾವಳಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ನೆರೆಪಿಡಿತ ಪ್ರದೇಶಕ್ಕೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಭೇಟಿ ಪರಿಶೀಲನೆ
ಉತ್ತರಕನ್ನಡ ಜಿಲ್ಲೆ ಪ್ರವಾಸದಲ್ಲಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಅಂಕೋಲಾ ತಾಲೂಕಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಪ್ರವಾಹದಿಂದಾದ ಹಾನಿ ಹಾಗೂ ಪರಿಹಾರ ಕಾರ್ಯದ ಕುರಿತು ಮಾಹಿತಿ ಪಡೆದರು.
ಅಂಕೋಲಾ ತಾಲೂಕಿನಲ್ಲಿ ಆಗಸ್ಟ್ ತಿಂಗಳ ಮೊದಲ ವಾರ ಸುರಿದ ಭಾರಿ ಮಳೆಗೆ ನೆರೆಹಾವಳಿ ಸೃಷ್ಟಿಯಾಗಿ ಸಾಕಷ್ಟು ಹಾನಿಯಾಗಿತ್ತು. ಇಲ್ಲಿನ ರಾಮನಗುಳಿ ಹಾಗೂ ಸುಂಕಸಾಳ ಬಳಿ ತೂಗು ಸೇತುವೆಗಳು ಕೊಚ್ಚಿ ಹೋಗಿ ಡೊಂಗ್ರಿ ಪಂಚಾಯತ್ ಸಂಪೂರ್ಣ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ, ಅಧಿಕಾರಿಗಳಿಂದ ಹಾನಿ ಹಾಗೂ ಪರಿಹಾರ ಕಾರ್ಯದ ಕುರಿತು ಮಾಹಿತಿ ಪಡೆದರು.
ಇನ್ನು ಸಂಕಸಾಳ ಬಳಿಯ ಅಂಗನವಾಡಿ ಹಾಗೂ ಹೈಸ್ಕೂಲ್ ಶಾಲಾ ಕಟ್ಟಡ ವೀಕ್ಷಣೆ ನಡೆಸಿದ ಅವರು ದುರಸ್ತಿಗೆ ಸೂಚಿಸಿದರು. ಬಳಿಕ ಕಾರವಾರದ ಜಿಲ್ಲಾಸ್ಪತ್ರೆಗೆ ತೆರಳಿ ವಾರ್ಡ್ ವೀಕ್ಷಣೆ ನಡೆಸಿ ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಜಿ. ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.