ಕರ್ನಾಟಕ

karnataka

ETV Bharat / state

ಅಪಾಯದ‌ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು: ವಿಭೂತಿ, ನಾಗರಮಡಿ, ಗೋಲಾರಿ ಫಾಲ್ಸ್​ಗೆ ಪ್ರವಾಸಿಗರ ನಿಷೇಧ - ಅಪಾಯದ‌ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ನಯನಮನೋಹರ ದೃಶ್ಯವನ್ನ ಕಟ್ಟಿಕೊಡುತ್ತಿವೆ. ಆದರೆ, ಕಾರವಾರ ತಾಲೂಕಿನ ನಾಗರಮಡಿ, ಗೋಲಾರಿ ಹಾಗೂ ಅಂಕೋಲಾ ತಾಲೂಕಿನ ವಿಭೂತಿ ಜಲಪಾತ ಸೇರಿದಂತೆ ಕೆಲವೊಂದು ಜಲಪಾತಗಳ ಬಳಿ ಸೂಕ್ತ ಸುರಕ್ಷತೆ ಇಲ್ಲದ ಹಿನ್ನೆಲೆ ಪ್ರವಾಸಿಗರು ಆಗಮಿಸದಂತೆ ನಿಷೇಧ ಹೇರಲಾಗಿದೆ.

Vibhuti Falls
ವಿಭೂತಿ ಜಲಪಾತ

By

Published : Jul 16, 2022, 11:17 AM IST

ಕಾರವಾರ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕರಾವಳಿಯ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ, ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿವೆ. ಆದರೆ, ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನೀವೇನಾದರೂ ಉತ್ತರಕನ್ನಡಕ್ಕೆ ಪ್ರವಾಸಕ್ಕೆ ಬರಬೇಕು ಅಂದುಕೊಂಡಿದ್ದರೆ ಸದ್ಯಕ್ಕೆ ಬರದೇ ಇರೋದು ಒಳ್ಳೆಯದು.

ಜಿಲ್ಲೆಯ ಕೆಲವೊಂದು ಜಲಪಾತಗಳು ಅಪಾಯದ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವುದರಿಂದ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಹೌದು, ಮಳೆಗಾಲ ಬಂತು ಅಂದ್ರೆ ಕರಾವಳಿ ಜಿಲ್ಲೆ ಉತ್ತರಕನ್ನಡದ ಹಲವೆಡೆ ಇರುವ ಹತ್ತಾರು ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಹಚ್ಚಹಸಿರಿನ ಪರಿಸರದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಮನಮೋಹಕ ದೃಶ್ಯಗಳನ್ನ ಕಣ್ತುಂಬಿಕೊಳ್ಳುವುದೇ ಒಂದು ರೀತಿ ಭಾಗ್ಯ.

ಹೀಗಾಗಿಯೇ, ಮಳೆಗಾಲ ಆರಂಭವಾದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯತ್ತ ಮುಖಮಾಡುತ್ತಾರೆ. ಆದರೆ, ಈ ಬಾರಿ ಹೀಗೆ ಪ್ರವಾಸಕ್ಕೆ ಬರುವವರಿಗೆ ನಿರಾಸೆಯಾಗೋದು ಖಂಡಿತ. ಏಕೆಂದರೆ, ಕೆಲವೊಂದು ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಅಪಾಯದ‌ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು

ಕಾರವಾರ ತಾಲೂಕಿನ ನಾಗರಮಡಿ, ಗೋಲಾರಿ ಹಾಗೂ ಅಂಕೋಲಾ ತಾಲೂಕಿನ ವಿಭೂತಿ ಜಲಪಾತ ಸೇರಿದಂತೆ ಕೆಲವೊಂದು ಜಲಪಾತಗಳಿಗೆ ಪ್ರವಾಸಿಗರು ಆಗಮಿಸದಂತೆ ನಿಷೇಧ ಹೇರಲಾಗಿದೆ. ಮಳೆಯ ತೀವ್ರತೆ ಹೆಚ್ಚಿದ್ದು, ಜಲಪಾತಗಳು ಅಪಾಯಕಾರಿ ರೀತಿಯಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಆಗಿರುತ್ತವೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಲಪಾತದಿಂದ ಧುಮ್ಮಿಕ್ಕುವ ನೀರಿನ ವೇಗ ಸಹ ಹೆಚ್ಚಿಗೆ ಇದ್ದು ಇಂತಹ ಸಂದರ್ಭದಲ್ಲಿ ಮೋಜು ಮಸ್ತಿಗೆ ತೆರಳುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಲಿದೆ. ಅಲ್ಲದೇ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತದಲ್ಲಿ ಈಜಾಡಲು ತೆರಳುವುದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುವುದು ಸೇರಿದಂತೆ ಅಪಾಯವನ್ನ ಲೆಕ್ಕಿಸದೇ ವರ್ತಿಸುತ್ತಾರೆ.

ಕಳೆದ ಕೆಲ ವರ್ಷಗಳ ಹಿಂದೆ ಕಾರವಾರದ ನಾಗರಮಡಿ ಜಲಪಾತದ ಬಳಿಯ ನೀರಿನಲ್ಲಿ ಪ್ರವಾಸಿಗರು ಆಟವಾಡುತ್ತಿದ್ದ ವೇಳೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಐದು ಮಂದಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. ಹೀಗಾಗಿ, ಮಳೆಗಾಲದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಪಾತಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಸಹ ಸಾಕಷ್ಟು ಮಂದಿ ಪ್ರವಾಸಿಗರು ಜಲಪಾತದ ಬಳಿ ಬಂದು ನೋಡಲಾಗದೇ ವಾಪಸ್​ ಆಗುತ್ತಿದ್ದಾರೆ.

ಇನ್ನು ಕಡಲತೀರಗಳಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸುವುದರಿಂದ ಬೀಚ್‌ಗಳೂ ಸಹ ಅಪಾಯಕಾರಿಯಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಕಡಲತೀರದಲ್ಲಿ ಕೆಂಪು ಬಾವುಟ ಹಾಕಿ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಮಳೆಗಾಲ ಮುಗಿಯುವವರೆಗೆ ಪ್ರವಾಸಿಗರು ಕಡಲತೀರ ಹಾಗೂ ಜಲಪಾತಗಳಿಂದ ಕೊಂಚ ದೂರವಿರೋದೇ ಉತ್ತಮ ಎನ್ನುವಂತಾಗಿದೆ.

ಇದನ್ನೂ ಓದಿ:ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾದ ಸಹಸ್ತ್ರಕುಂಡ್ ಜಲಪಾತದ ಮನ ಮೋಹಕ ದೃಶ್ಯ

ABOUT THE AUTHOR

...view details