ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯದ ಹೋರಾಟದ ದಿನಗಳನ್ನು ನೆನೆದ ಶತಾಯುಷಿ ವೆಂಕಣ್ಣ ನಾಯಕ - ಸ್ವಾತಂತ್ರ್ಯದ ಅಮೃತ ಮಹೋತ್ಸವ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷದ ತುಂಬಿರುವ ಸಂತಸ ನನಗಿದೆಯಾದರೂ, ನಾವೆಣಿಸಿದ ಅಭಿವೃದ್ಧಿ ಸಾಧಿಸಿಲ್ಲ ಎಂಬ ನೋವು ನನಗಿದೆ. ಮುಂದಿನ ದಿನಗಳಲ್ಲಿ ದೇಶ ರಾಮ ರಾಜ್ಯವಾಗಬೇಕು. ಈ ದಿಸೆಯಲ್ಲಿ ಯುವ ಜನಾಂಗ ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವುದರೊಂದಿಗೆ ಪ್ರಗತಿಗೆ ಶ್ರಮಿಸಬೇಕು ಎನ್ನುತ್ತಾರೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ.

Venkanna Naik and his wife
ವೆಂಕಣ್ಣ ನಾಯಕ ದಂಪತಿ

By

Published : Aug 15, 2022, 10:08 AM IST

ಕಾರವಾರ:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂತಸದ ಹಿಂದೆ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದಾನಗಳ ಕಥಾನಕಗಳು ನಮ್ಮ ಮುಂದಿವೆ. ಇವೆಲ್ಲವುಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ದ ಸೂರ್ವೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕರವರ ಹೋರಾಟ ಕೂಡ ಒಂದು.

ಸೂರ್ವೆಯ ಬೊಮ್ಮಯ್ಯ ಹಾಗೂ ಸಾವಿತ್ರಿ ದಂಪತಿಗಳ ಹಿರಿಯ ಮಗನಾಗಿರುವ ವೆಂಕಣ್ಣ ನಾಯಕರು ಕೃಷಿ ಕುಟುಂಬದಲ್ಲಿ ಬೆಳೆದು ಬಂದವರು. ಕಲಿತದ್ದು ಮೂರನೇ ತರಗತಿಯಾದರೂ ಅಪಾರವಾದ ಜ್ಞಾನವನ್ನು ಸಂಪಾದಿಸಿದವರು. ಎಳೆವೆಯಿಂದಲೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾಗಿದ್ದ ಇವರು ಸೂರ್ವೆಯ ಹಿರಿಯರಿಂದೊಡಗೂಡಿ ಗಾಂಧೀಜಿಯವರ ಹೋರಾಟದ ಕರೆಗೆ ಓಗೊಟ್ಟಿದ್ದರು.

ಸೂರ್ವೆಯ ಕಳಸ ದೇವಸ್ಥಾನದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಕರನಿರಾಕರಣೆಯ ಪ್ರತಿಜ್ಞೆ ಸಾಲಿನಲ್ಲಿ ವೆಂಕಣ್ಣ ನಾಯಕ ಕೂಡಾ ಮುಂಚೂಣಿಯಲ್ಲಿದ್ದರು. ಸೂರ್ವೆಯ 39 ಖಾತೆದಾರರಲ್ಲಿ 33 ಖಾತೆದಾರರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ವಿಶೇಷ. ಕರ ನಿರಾಕರಣೆ, ಜಂಗಲ್ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಅಂದೋಲನ ಸೇರಿದಂತೆ ಬ್ರಿಟಿಷರ ವಿರುದ್ಧ ಕೈಗೊಂಡ ಹೋರಾಟದ ದಿನಗಳು ಇಂದಿಗೂ ಇವರ ಕಣ್ಣ ಮುಂದಿವೆ.

ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ:ಚೈತನ್ಯದ ಚಿಲುಮೆಯಂತಿರುವ ವೆಂಕಣ್ಣ ನಾಯಕ ಅವರು ಪತ್ನಿ ಪಾರ್ವತಿ ಹಾಗೂ ಆರು ಮಕ್ಕಳೊಂದಿಗೆ ತುಂಬು ಸಂಸಾರ ನಡೆಸುತ್ತಿದ್ದಾರೆ. "ಸತ್ಯಾಗ್ರಹದ ಕಾಲಾವಧಿಯಲ್ಲಿ ನಾವು ಕಂಡ ಕನಸುಗಳು ಮಾತ್ರ ಇನ್ನೂ ಸಾಕಾರಗೊಂಡಿಲ್ಲ ಎಂಬ ಕೊರಗು ನಮಗಿದೆ.ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷದ ತುಂಬಿರುವ ಸಂತಸ ನನಗಿದೆಯಾದರೂ, ನಾವೆಣಿಸಿದ ಅಭಿವೃದ್ಧಿ ಸಾಧಿಸಿಲ್ಲ ಎಂಬ ನೋವು ನನಗಿದೆ. ಮುಂದಿನ ದಿನಗಳಲ್ಲಿ ದೇಶ ರಾಮ ರಾಜ್ಯವಾಗಬೇಕು. ಈ ದಿಸೆಯಲ್ಲಿ ಯುವ ಜನಾಂಗ ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವುದರೊಂದಿಗೆ ಪ್ರಗತಿಗೆ ಶ್ರಮಿಸಬೇಕು" ಎನ್ನುತ್ತಾರೆ ವೆಂಕಣ್ಣ ನಾಯಕ.

ಸ್ವಾರ್ಥಕ್ಕಾಗಿ ರಾಜಕೀಯ:ದೇಶ ಅಭಿವೃದ್ಧಿಯ ದಿಸೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ನಾವು ಎಣಿಸಿದಷ್ಟು ಅಭಿವೃದ್ಧಿಯಾಗಿಲ್ಲ. ನಮ್ಮ ಕನಸಿನಂತೆ ದೇಶ ಸುಧಾರಣೆಯಾಗಿದ್ದರೆ ರಾಮ ರಾಜ್ಯ ನಮ್ಮದಾಗಿರುತ್ತಿತ್ತು. ಇಂದಿನ ರಾಜಕಾರಣಕ್ಕೂ, ಅಂದಿನ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸ. ಅಂದು ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಸೇವೆ ಮಾಡಿದರೆ, ಇಂದು ಸ್ವಾರ್ಥಕ್ಕಾಗಿ ರಾಜಕೀಯ ಮಾಡುವವರೇ ಅಧಿಕ ಎಂದು ಬೇಸರ ವ್ಯಕ್ತಪಡಿಸಿದರು.

'ಮಾಡು ಇಲ್ಲವೇ ಮಡಿ' ಎಂಬ ಗಾಂಧೀಜಿಯ ನುಡಿಯಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯವರದ್ದು ಸಿಂಹ ಪಾಲೆಂದರೂ ಅತಿಶಯೋಕ್ತಿಯಾಗದು. ಇಲ್ಲಿನ 39 ಖಾತೆದಾರರಲ್ಲಿ 33 ಖಾತೆದಾರರು ಹೋರಾಟದಲ್ಲ ಪಾಲ್ಗೊಂಡಿರುವುದು ವಿಶೇಷ. ಸೂರ್ವೆಯ ಕಳಸ ದೇವಸ್ಥಾನದಲ್ಲಿ ಕರ ನಿರಾಕರಣೆಯ ಮೊದಲ ಸಭೆ ನಡೆದ ಸ್ಥಳ. ಅಂದು ನಮಗೆಲ್ಲರಿಗೂ ಹೋರಾಟವೇ ಬಹುದೊಡ್ಡ ಹಬ್ಬವಾಗಿತ್ತು ಎಂದು ವೆಂಕಣ್ಣ ನಾಯಕ ಸ್ಮರಿಸಿದರು.

ಇದನ್ನು ಓದಿ:ನಮ್ಮ ಸ್ವಾತಂತ್ರ್ಯ ನಡಿಗೆಗೆ ಜನರಿಂದ ಇಷ್ಟು ದೊಡ್ಡ ಪ್ರತಿಕ್ರಿಯೆ ನಿರೀಕ್ಷೆ ಮಾಡಿರಲಿಲ್ಲ.. ಡಿಕೆಶಿ

ABOUT THE AUTHOR

...view details