ಶಿರಸಿ/ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ಒಂದು ವಾರದಲ್ಲಿ ಡ್ರಗ್ಸ್ ಪೆಡ್ಲರ್ಸ್ ಹಾಗೂ ಬಳಕೆದಾರರು ಸೇರಿ 9 ಪ್ರಕರಣಗಳಡಿ 21ಕ್ಕೂ ಅಧಿಕ ಮಂದಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಬಂಧಿತರ ಚೈನ್ ಲಿಂಕ್ ಪರಿಶೀಲನೆ ಮಾಡಿ ತನಿಖೆ ನಡೆಸುತ್ತಿರುವ ಜಿಲ್ಲಾ ಪೊಲೀಸರು ಹುಬ್ಬಳ್ಳಿ, ಧಾರವಾಡ, ಹಾವೇರಿ, ಗೋವಾ ಮುಂತಾದೆಡೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಗಾಂಜಾ ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಹೊಂದಿದ್ದಾರೆ.
ಅಲ್ಲದೆ ಜಿಲ್ಲೆಯ ಹಳಿಯಾಳ, ದಾಂಡೇಲಿ, ಯಲ್ಲಾಪುರ, ಮುಂಡಗೋಡ, ಕಾರವಾರವನ್ನು ಗಾಂಜಾ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಪೊಲೀಸರು, ಆ ಪ್ರದೇಶಗಳಲ್ಲಿ ಗಾಂಜಾ ಬೆಳೆಸುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕಾರಣದಿಂದ ಗಾಂಜಾ ಮಾರಾಟಗಾರರು, ಬಳಕೆದಾರರನ್ನು ಹಿಡಿಯಲು ಜಿಲ್ಲೆಯಲ್ಲಿ, ತಾಲೂಕು ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಸರ್ಕಲ್ ಇನ್ಸ್‌ಪೆಕ್ಟರ್ ವ್ಯಾಪ್ತಿಯಲ್ಲೂ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಡ್ರಗ್ಸ್ ಹಾವಳಿ ರಾಜ್ಯದಲ್ಲಿ ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಬಯಲಿಗೆ ಬೀಳುತ್ತಿದ್ದಂತೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದ್ದು, ಅಕ್ರಮವಾಗಿ ಸದ್ದಿಲ್ಲದೆ ನಡೆಯುತ್ತಿದ್ದ ಗಾಂಜಾ ವ್ಯವಹಾರವನ್ನು ಪತ್ತೆ ಹಚ್ಚುತ್ತಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಜಿಲ್ಲಾ ಮಟ್ಟದಲ್ಲಿ ತಂಡವೊಂದನ್ನು ರೂಪಿಸಲಾಗಿದ್ದು, ಗಾಂಜಾ ಸರಬರಾಜಾಗಬಹುದಾದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ನಿಗಾ ವಹಿಸಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಗೋವಾ, ಬೆಳಗಾವಿ, ಹಾವೇರಿ ಗಡಿಗಳ ಮೇಲೆ ಹೆಚ್ಚು ನಿಗಾ ಇರಿಸಿದ್ದು, ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ಮೇಲೂ ಸಹ ಹದ್ದಿನ ಕಣ್ಣನ್ನು ಇರಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು.
ಯಾರಿಗೂ ತಿಳಿದಂತೆ ಗಾಂಜಾ ಗಿಡಗಳನ್ನು ಬೆಳೆಯುವುದರಿಂದ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಆಯಾ ತಾಲೂಕುಗಳಲ್ಲಿ ಈ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿವೆಯಾದರೂ ಹಿಂದಿನಿಂದಲೂ ಗಾಂಜಾ ಸಾಗಾಟ ಇದ್ದಿದ್ದಾಗಿ ಶಾಸಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಇದೀಗ ಗಾಂಜಾ ತಡೆಗೆ ಪೊಲೀಸ್ ಇಲಾಖೆ ಸಕ್ರಿಯವಾಗಿರುವುದು ಸ್ವಾಗತಾರ್ಹವಾಗಿದ್ದು, ಜಿಲ್ಲೆಯಿಂದಲೇ ಗಾಂಜಾವನ್ನು ಹೊರಹಾಕುವ ಕೆಲಸವಾಗಬೇಕು ಎಂದು ಒತ್ತಾಯಿಸಿದ್ದಾರೆ.