ಕಾರವಾರ: ವಿವಿಧ ಇಲಾಖೆಗಳಲ್ಲಿ ಕೆಲ ಸರ್ಕಾರಿ ನೌಕರರು ಕೆಲಸಕ್ಕಿಂತ ಇತರೆ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ನಿರ್ಲಕ್ಷ ತೋರುವ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಈ ಬಗ್ಗೆ ಎಲ್ಲಾ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ. ಕೆ ಹರೀಶ್‌ಕುಮಾರ್ ಅಧಿಕೃತ ಆದೇಶ ಹೊರಿಡಿಸಿದ್ದಾರೆ. ವಿವಿಧ ಇಲಾಖೆ ಕಚೇರಿ ಹಾಗೂ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮಯ ಪಾಲನೆಯ ಅರಿವು ಮೂಡಿಸಲು, ಚಲನವಲನವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದ್ದಾರೆ.
ತಮ್ಮ ಕೆಲಸ ಕಾರ್ಯಗಳಿಗೆಂದು ಸಾರ್ವಜನಿಕರು ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದ ವೇಳೆ ನಿಗದಿಪಡಿಸಿದ ಸಮಯದಲ್ಲಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಕರ್ತವ್ಯಕ್ಕೆ ಲಭ್ಯವಿರುವುದಿಲ್ಲ. ಒಂದು ವೇಳೆ ಕಚೇರಿಗೆ ಅವರು ಬಂದರೂ ಸಹ ಹರಟೆ ಹೊಡೆಯುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಊಟದ ಸಮಯ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಕ್ಯಾಂಟೀನ್‌ನಲ್ಲಿ ಸಮಯ ವ್ಯರ್ಥ ಮಾಡುತ್ತಿರುತ್ತಾರೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕೆಂದು ಡಿಸಿ ತಮ್ಮ ಆದೇಶದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.