ಕರ್ನಾಟಕ

karnataka

ETV Bharat / state

ಶಿಥಿಲಗೊಂಡ ತಡೆಗೋಡೆ: ಊರು ತೊರೆಯುತ್ತಿರುವ ತೊಪ್ಪಲಕೇರಿ ಗ್ರಾಮಸ್ಥರು - Uttarakhand people demand to build a barrier

ಕಡಲ ತೀರಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತೊಪ್ಪಲಕೇರಿ ಗ್ರಾಮಕ್ಕೆ ಇದೀಗ ಸಮುದ್ರದಿಂದಲೇ ಆತಂಕ ಎದುರಾಗಿದೆ. ತೀರ ಪ್ರದೇಶಗಳ ಒಂದೊಂದೇ ಮನೆಗಳು ಖಾಲಿಯಾಗಿರುವುದು ಇದಕ್ಕೆ ನಿದರ್ಶನ.

Thoppalakeri
ಶಿಥಿಲಗೊಂಡು ತಡೆಗೋಡೆ: ಊರು ತೊರೆಯುತ್ತಿರುವ ತೊಪ್ಪಲಕೇರಿ ಗ್ರಾಮಸ್ಥರು

By

Published : Jan 17, 2022, 9:39 AM IST

ಕಾರವಾರ: ಅದು ಸಮುದ್ರ ಹಾಗೂ ನದಿ ಸಂಗಮದ ಪ್ರದೇಶಕ್ಕೆ ಸಮೀಪದಲ್ಲಿರುವ ಗ್ರಾಮ. ಸಮುದ್ರ ತೀರಕ್ಕೆ ಹೊಂದಿಕೊಂಡೇ ಗ್ರಾಮದ ಹಲವರ ಮನೆಗಳಿದ್ದು, ಕೆಲ ವರ್ಷಗಳವರೆಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಇದೀಗ ತೀರಪ್ರದೇಶದಲ್ಲಿದ್ದ ಒಂದೊಂದೇ ಮನೆಗಳ ಜನರು ಮನೆ ಖಾಲಿ ಮಾಡಿ ತೆರಳುತ್ತಿದ್ದಾರೆ. ದಡದಲ್ಲಿನ ಮನೆಗಳು ಪಾಳು ಬಿದ್ದಿರುವುದು ಒಂದೆಡೆಯಾದ್ರೆ, ಮುಂದಿನ ದಿನಗಳಲ್ಲಿ ಗ್ರಾಮವೇ ನಾಶವಾಗುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ತಡೆಗೋಡೆ ನಿರ್ಮಿಸುವಂತೆ ತೊಪ್ಪಲಕೇರಿ ಗ್ರಾಮಸ್ಥರ ಆಗ್ರಹ

ಹೌದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತೊಪ್ಪಲಕೇರಿ ಗ್ರಾಮ ಶರಾವತಿ ನದಿ ಹಾಗೂ ಅರಬ್ಬೀ ಸಮುದ್ರ ಸೇರುವ ಸಂಗಮಕ್ಕೆ ಹೊಂದಿಕೊಂಡಿರುವ ಪ್ರದೇಶ. ನದಿ ಹಾಗೂ ಸಮುದ್ರ ಸೇರುವ ಸಂಗಮ ಪ್ರದೇಶವಾಗಿರುವ ಹಿನ್ನೆಲೆ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ತೀರದಲ್ಲಿ ಈ ಹಿಂದೆ ತಡೆಗೋಡೆಯೊಂದನ್ನ ನಿರ್ಮಿಸಲಾಗಿತ್ತು. ಈ ತಡೆಗೋಡೆ ಕಳೆದ ನಾಲ್ಕೈದು ವರ್ಷಗಳಲ್ಲಿ ಹಂತ ಹಂತವಾಗಿ ಶಿಥಿಲಗೊಂಡು ಸಂಪೂರ್ಣವಾಗಿ ಕಿತ್ತುಹೋಗಿದೆ. ಹೀಗಾಗಿ ಸಮುದ್ರದ ನೀರು ಒಳನುಗ್ಗುತ್ತಿದೆ.

ತೀರ ಪ್ರದೇಶದಲ್ಲಿನ ಮನೆಗಳಿಗೆ ನುಗ್ಗುತ್ತಿರುವ ನೀರು:

ತಡೆಗೋಡೆ ಇಲ್ಲದ ಪರಿಣಾಮ ಮಳೆಗಾಲದ ವೇಳೆ ತೀರಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲದೇ ಅಮವಾಸ್ಯೆ ಹಾಗೂ ಹುಣ್ಣೆಮೆ ಸಂದರ್ಭದಲ್ಲಿ ಕಡಲಿನ ಉಬ್ಬರ, ಇಳಿತ ಹೆಚ್ಚಿರುವುದರಿಂದ ಕಡಲ ಕೊರೆತ ಉಂಟಾಗುತ್ತಿದೆ. ಇದರಿಂದಾಗಿ ತೀರಪ್ರದೇಶದಲ್ಲಿದ್ದ ಕೆಲವರು ಈಗಾಗಲೇ ತಮ್ಮ ಮನೆಯನ್ನು ತೊರೆದು ಬೇರೆಡೆಗೆ ತೆರಳಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಟ:

ಇನ್ನು ಅಲೆ ತಡೆಗೋಡೆ ಇಲ್ಲದ ಪರಿಣಾಮ ತೀರ ಪ್ರದೇಶಗಳಲ್ಲಿದ್ದ ತೆಂಗಿನ ಮರಗಳು ಒಣಗಿ ಹೋಗುತ್ತಿವೆ. ಅಲ್ಲದೇ ಸಮುದ್ರದ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿಗೂ ತೊಂದರೆಯುಂಟಾಗಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ. ತಡೆಗೋಡೆ ಇಲ್ಲದ್ದರಿಂದ ಸಮುದ್ರದ ನೀರು ನುಗ್ಗಿ ನೂರಾರು ಎಕರೆ ಕೃಷಿ ಭೂಮಿ ಸಹ ಬಂಜರು ಬೀಳುವಂತಾಗಿದ್ದು, ಸುತ್ತಲಿನ ಗ್ರಾಮಸ್ಥರಿಗೂ ಇದರಿಂದ ಸಮಸ್ಯೆ ಉಂಟಾಗುತ್ತಿದೆ.

ಸಮುದ್ರ ಕೊರೆತಕ್ಕೆ ಬಲಿಯಾಗುವ ಆತಂಕ!

ಗ್ರಾಮಕ್ಕೆ ತಡೆಗೋಡೆ ನಿರ್ಮಿಸಿಕೊಡುವಂತೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದು, ಒಂದು ಬಾರಿ ಹೆದ್ದಾರಿ ತಡೆದು ಪ್ರತಿಭಟನೆ ಸಹ ನಡೆಸಲಾಗಿದೆ. ಆದರೂ ಸಹ ಯಾವೊಬ್ಬ ಅಧಿಕಾರಿಗಳೂ ಇತ್ತ ಗಮನಹರಿಸುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಇಡೀ ಗ್ರಾಮವೇ ಸಮುದ್ರ ಕೊರೆತಕ್ಕೆ ಬಲಿಯಾಗುವ ಆತಂಕವಿದ್ದು, ಶೀಘ್ರವೇ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಖ್ಯಾತ ಗೀತ ರಚನೆಕಾರ ಅಲೆಪ್ಪಿ ರಂಗನಾಥ್; ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಇನ್ನಿಲ್ಲ

For All Latest Updates

TAGGED:

ABOUT THE AUTHOR

...view details