ಕರ್ನಾಟಕ

karnataka

ETV Bharat / state

ಉತ್ತರಕನ್ನಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿ; ಹಳೆಬರೇ ಮತ್ತೆ ಅಖಾಡಕ್ಕೆ - karnataka assembly election 2023

ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದು ಯಾರಿಗೆಲ್ಲ ಟಿಕೆಟ್​ ನೀಡಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

ಟಿಕೆಟ್​ ಘೋಷಣೆಯಾದ ಅಭ್ಯರ್ಥಿಗಳು
ಟಿಕೆಟ್​ ಘೋಷಣೆಯಾದ ಅಭ್ಯರ್ಥಿಗಳು

By

Published : Apr 12, 2023, 8:52 AM IST

ಕಾರವಾರ: ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನಿನ್ನೆ ಬಿಡುಗಡೆಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮಣೆ ಹಾಕಲಾಗಿದೆ. ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರವಾರ-ಅಂಕೋಲಾ ಕ್ಷೇತ್ರದಿಂದ ಶಾಸಕಿ ರೂಪಾಲಿ ನಾಯ್ಕ, ಯಲ್ಲಾಪುರ-ಮುಂಡಗೋಡ ಕ್ಷೇತ್ರ ಸಚಿವ ಶಿವರಾಮ್ ಹೆಬ್ಬಾರ್, ಕುಮಟಾ-ಹೊನ್ನಾವರ ಕ್ಷೇತ್ರದಿಂದ ಶಾಸಕ ದಿನಕರ ಶೆಟ್ಟಿ, ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಶಾಸಕ ಸುನೀಲ್ ನಾಯ್ಕ, ಹಳಿಯಾಳ ಜೊಯಿಡಾದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಟಿಕೆಟ್ ಘೋಷಣೆ ಮಾಡಿ ಬಿಜೆಪಿ ಹೈಕಮಾಂಡ್ ಕೊನೆಗೂ ಜಿಲ್ಲೆಯಲ್ಲಿ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ.

ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಏಳನೇ ಬಾರಿ ಕೂಡ ಸ್ಪರ್ಧೆ ಬಯಸಿ ಸಾಕಷ್ಟು ಪ್ರಚಾರ ಕೂಡ ನಡೆಸಿದ್ದರು. ಆದರೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಾಗೇರಿ ಅವರಿಗೆ ಈ ಬಾರಿ ಟಿಕೆಟ್ ನೀಡುತ್ತಿಲ್ಲ ಎಂಬ ಸುದ್ದಿಕೂಡ ಹರಿದಾಡಲಾರಂಭಿಸಿತ್ತು. ಅಲ್ಲದೆ ದಿನಕರ ಶೆಟ್ಟಿ ಅವರಿಗೂ ಈ ಬಾರಿ ಟಿಕೆಟ್ ನೀಡುತ್ತಿಲ್ಲ ಎಂಬ ಸುದ್ದಿಗಳು ಹರಿದಾಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲಕ್ಕೂ ಕಾರಣವಾಗಿತ್ತು. ಆದರೆ ಹೈಕಮಾಂಡ್ ಇದೀಗ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆ ಮಾಡುವ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದಿದೆ.

ಇನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಮತ್ತು ಬಿಜೆಪಿ ಮುಖಂಡ ಸಿಟಿ ರವಿ ಅವರಿಗೆ ಮಾಂಸದೂಟ ಮಾಡಿಸಿ ದೇವಸ್ಥಾನಕ್ಕೆ ಕರೆದುಕೊಂಡು ತೆರಳಿದ ಬಳಿಕ ಬಿಜೆಪಿ ಮುಜುಗರ ಅನುಭವಿಸಿದ ಹಿನ್ನೆಲೆಯಲ್ಲಿ ಟಿಕೆಟ್ ತಪ್ಪಲಿದೆ. ಅವರ ಬದಲಿಗೆ ಬೆರೆಯವರಿಗೆ ಟಿಕೆಟ್​ ನೀಡಲಾಗುತ್ತಿದೆ ಎಂದು ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಶಾಸಕಿ ರೂಪಾಲಿ ನಾಯ್ಕ ಅವರಿಗೂ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸಂಸದ ಅನಂತಕುಮಾರ್ ಹೆಗಡೆ ಅವರು ಇಬ್ಬರಿಗೂ ಟಿಕೆಟ್ ನೀಡುವುದಕ್ಕೆ ಅಡ್ಡಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ನಿನ್ನೆ ಪ್ರಕಟವಾದ ಮೊದಲ ಪಟ್ಟಿಯಲ್ಲಿಯೇ ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿ ಪ್ರಕಟ ಮಾಡಿದ್ದು ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಈ ಮೂಲಕ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದವರೇ ಈ ಬಾರಿ ಟಿಕೆಟ್​ ಪಡೆದಿದ್ದಾರೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಶಿವರಾಮ್ ಹೆಬ್ಬಾರಗೂ ಈ ಬಾರಿ ಟಿಕೆಟ್ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕುಮಟಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೊರತು ಪಡಿಸಿ ಬಿಜೆಪಿ-ಕಾಂಗ್ರೆಸ್​ನ ಎಲ್ಲ ಕ್ಷೇತ್ರಗಳಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಜೆಡಿಎಸ್ ಕುಮಟಾ, ಶಿರಸಿ, ಹಳಿಯಾಳದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಮೂರು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ:ಅಥಣಿಯಿಂದ ಟಿಕೆಟ್​ ಪಡೆದ ಮಹೇಶ್ ಕುಮಟಳ್ಳಿ.. ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದ ಜಾರಕಿಹೊಳಿ ಆಪ್ತ

ABOUT THE AUTHOR

...view details