ಕಾರವಾರ :ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲೆಯಲ್ಲಿನ ಫಾಲ್ಸ್ ಹಾಗೂ ಬೀಚ್ಗಳ ಬಳಿ ಹೆಚ್ಚಿನ ನಿಗಾವಹಿಸಿದ್ದಾರೆ.
ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿಖಾಕಿ ಹದ್ದಿನ ಕಣ್ಣು ಉತ್ತರಕನ್ನಡ ಜಿಲ್ಲೆಯ ಜಲಪಾತಗಳಿಗೆ ಹಾಗೂ ಕಡಲತೀರಗಳಿಗೆ ವರ್ಷಪೂರ್ತಿ ಪ್ರವಾಸಿಗರು ಆಮಿಸುತ್ತಿರುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾದಾಗಿನಿಂದ ವೀಕೆಂಡ್ ಎಂಜಾಯ್ ಮಾಡಲು ಪ್ರವಾಸಿ ತಾಣಗಳತ್ತ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯ ಕಾಡಂಚಿನ ಪ್ರವಾಸಿ ತಾಣಗಳು, ಜಲಪಾತಗಳು, ಕಡಲತೀರಗಳು ಸೇರಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರದೇಶಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಹೆಚ್ಚಿದ ಪೊಲೀಸ್ ತಪಾಸಣೆ :ಇದರ ಜೊತೆಗೆ ಜಿಲ್ಲೆಯನ್ನು ಸಂಪರ್ಕಿಸುವ ಗಡಿ ತಾಲೂಕುಗಳಲ್ಲಿ ಚೆಕ್ಪೊಸ್ಟ್ ತೆರೆದು ಹೊರ ರಾಜ್ಯಗಳಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಕಾಡಂಚಿನ ಜಲಪಾತಗಳಿಗೆ ತೆರಳುವವರನ್ನು ತಡೆಯಲಾಗುತ್ತಿದೆ.
ಇಂತಹ ಪ್ರದೇಶಗಳಲ್ಲಿ 112 ಪೊಲೀಸ್ ಹೆಲ್ಪ್ಲೈನ್ ವಾಹನ ಹಾಗೂ ಸಿಬ್ಬಂದಿಯನ್ನಿಟ್ಟು ಎಚ್ಚರಿಕೆ ನೀಡಲಾಗುತ್ತಿದೆ. ಕಡಲತೀರಗಳಲ್ಲಿ ಹುಡುಗ-ಹುಡುಗಿಯರು ಕಾಲ ಕಳೆಯುತ್ತಿದ್ದರೆ ಅಲ್ಲಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಖಾಕಿ ಕಾರ್ಯಕ್ಕೆ ಮೆಚ್ಚುಗೆ :ಮಾತ್ರವಲ್ಲದೆ ಶಾಲಾ-ಕಾಲೇಜುಗಳು ಆರಂಭವಾಗುವ ಮತ್ತು ಬಿಡುವ ಸಮಯದಲ್ಲಿ ಪೊಲೀಸ್ ಇಲಾಖೆಯ 112 ಹೆಲ್ಪ್ಲೈನ್ ವಾಹನ, ಹೈವೇ ಪೆಟ್ರೋಲಿಂಗ್, ಶರಾವತಿ ಕಾವಲು ಪಡೆಗಳು ನಿರ್ಜನ ಪ್ರದೇಶಗಳಲ್ಲಿ ಓಡಾಟ ನಡೆಸಿ ನಿಗಾ ಇಡುವಂತೆ ಸೂಚಿಸಲಾಗಿದೆ. ಅರಣ್ಯಪ್ರದೇಶ ಹಾಗೂ ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಹೆಣ್ಣು ಮಕ್ಕಳ ಸುರಕ್ಷತತೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಬಿಜೆಪಿಗೆ ಸಿಹಿ.. ಎಂಇಎಸ್ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!