ನಿಯಂತ್ರಣಕ್ಕೆ ಬಾರದ ಕೊರೊನಾ: ತರಬೇತಿ ವೈದ್ಯರ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ
ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿನ ತರಬೇತಿ ವೈದ್ಯರೊಂದಿಗೆ ಅಗತ್ಯ ವಿರುವ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ನೇಮಕ ಮಾಡಿಕೊಂಡು ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಕಾರವಾರ:ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿನ ತರಬೇತಿ ವೈದ್ಯರನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ ಪಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿ ಮತ್ತು ವೈದ್ಯಾಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಕುರಿತ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿನ ತರಬೇತಿ ವೈದ್ಯರೊಂದಿಗೆ ಅಗತ್ಯ ವಿರುವ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ನೇಮಕ ಮಾಡಿಕೊಂಡು ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.
ಪಕ್ಕದ ಮಂಗಳೂರು, ಉಡುಪಿ, ಹುಬ್ಬಳ್ಳಿ, ಧಾರವಾಡ ಭಾಗದ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ವಾಗಿದ್ದು, ಇದರಿಂದ ಜಿಲ್ಲೆಯ ರೋಗಿಗಳ ಚಿಕಿತ್ಸೆಗೆ ನಿರಾಕರಿಸಲಾಗುತ್ತಿದೆ. ಜಿಲ್ಲೆಯ ಸೋಂಕಿತರಿಗೆ ಜಿಲ್ಲೆಯ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇನ್ನು ತಾಲೂಕಿನ ವೈದ್ಯರು ಹಾಗೂ ತಹಶೀಲ್ದಾರರ ಜೊತೆ ಮಾತನಾಡಿದ ಅವರು ಆಸ್ಪತ್ರೆಗಳಲ್ಲಿ ಇರುವ ಕೋವಿಡ್ ಬೆಡ್, ಆಕ್ಸಿಜನ್ ಸಿಲಿಂಡರ್, ಐಸಿಯು ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಪಡೆದ ಅವರು ಔಷಧ, ಆಕ್ಸಿಜನ್ ಸೇರಿದಂತೆ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದರೆ ತಕ್ಷಣ ತಿಳಿಸುವಂತೆ ಸೂಚಿಸಿದ್ದಾರೆ.