ಭಟ್ಕಳ(ಉತ್ತರ ಕನ್ನಡ):ಎಪ್ಪತ್ತು ದಿನಗಳ ಬಳಿಕ ಭಟ್ಕಳದಲ್ಲಿ ಕೊರೊನಾ ಸ್ವಲ್ಪ ಹತೋಟಿಗೆ ಬಂದಿದ್ದು, ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ. ಅಂಗಡಿ ಮುಂಗಟ್ಟು ತೆರೆಯಲು ಸಹ ನಿಗದಿತ ಸಮಯದ ಅವಕಾಶ ನೀಡಿದ್ದು, ಸಾಕಷ್ಟು ಕ್ರಮಗಳ ನಂತರ ಸಡಿಲಿಕೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಹೇಳಿದರು.
ತಾಲೂಕಾಡಳಿತದ ಜೊತೆ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಕೊರೊನಾ ಭಯದೊಂದಿಗೆ ಜೀವ ಹಾಗೂ ಜೀವನ ನಡೆಸಬೇಕಿದೆ ಎಂದರು. ಜಿಲ್ಲೆಗೆ ಹೋಲಿಸಿದರೆ ಭಟ್ಕಳದಲ್ಲಿ ಬಹುಪಾಲು ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಜನರು ಸೋಂಕು ತಡೆಗಟ್ಟಲು ಸಹಕಾರ ನೀಡಿ ಲಾಕ್ಡೌನ್ ಪಾಲನೆ ಮಾಡಿದ್ದಾರೆ ಎಂದರು.
ಈಗ ಹೆಚ್ಚಾಗಿ ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್ನಲ್ಲಿ ಇರುವುದರಿಂದ ಸಮುದಾಯಕ್ಕೆ ಹರಡುವ ಭೀತಿ ಇಲ್ಲವಾಗಿದೆ. ಕೊರೊನಾ ಹತೋಟಿಗೆ ತರಲು ಮೊದಲ ಹಂತದಿಂದ ಇಲ್ಲಿಯತನಕ ವೈದ್ಯರು, ಅಧಿಕಾರಿಗಳ ಶ್ರಮದ ಜೊತೆಗೆ ಸಾರ್ವಜನಿಕರ ಸಹಕಾರವೂ ಇದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಸುದ್ದಿಗೋಷ್ಠಿ ಕಾರವಾರದಲ್ಲಿ ನಾಳೆಯಿಂದ ಕೊರೊನಾ ಪರೀಕ್ಷೆಯ ಪ್ರಯೋಗಾಲಯ ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡಲಿದೆ. ಬೇರೆ ಲ್ಯಾಬ್ ತರಹ ನಮ್ಮಲ್ಲಿಯೂ ಉತ್ತಮ ರೀತಿಯಲ್ಲಿ ಆರಂಭವಾಗಲಿದೆ. ನುರಿತ ವೈದ್ಯರು, ತಜ್ಞರಿಂದ ಪ್ರಯೋಗಾಲಯದಲ್ಲಿ ಕೊರೊನಾ ಸೋಂಕಿತರ ಪತ್ತೆ ಕಾರ್ಯ ನಡೆಸಲಾಗುವುದು ಎಂದರು.
ಭಟ್ಕಳದಲ್ಲಿ ಮದುವೆ ಕಾರ್ಯಕ್ರಮ ನಡೆಸಲು ನೋಡಲ್ ಅಧಿಕಾರಗಳನ್ನು ನೇಮಿಸಲಿದ್ದೇವೆ. ನಿಗದಿತ ಎಲ್ಲಾ ಮಾಹಿತಿ ನೀಡಿ, ಜನರು ಹೆಚ್ಚಿನ ನಿಗಾ ವಹಿಸಬೇಕಿದೆ. ಕಾನೂನು ಮೀರಿ ಹೋದಲ್ಲಿ ಮದುವೆ ಕಾರ್ಯಕ್ರಮ ರದ್ದು ಮಾಡಲಿದ್ದೇವೆ ಎಂದು ಎಚ್ಚರಿಸಿದರು.