ಕರ್ನಾಟಕ

karnataka

ETV Bharat / state

ಅಪಾಯದ ಮಟ್ಟದಲ್ಲಿ ಮೈದುಂಬಿ ಹರಿದ ಉತ್ತರಕನ್ನಡದ ಜಲಪಾತಗಳು: ಮೋಜು ಮಸ್ತಿ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ..! - ಮಾಗೋಡ್ ಫಾಲ್ಸ್

ಜಿಲ್ಲೆಯಲ್ಲಿ ಜಲಪಾತಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಪ್ರವಾಸಿಗರು ಜಲಪಾತಗಳಲ್ಲಿ ಇಳಿದು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಅದ್ದರಿಂದ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಕೆಲವು ದಿನಗಳ ವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.

waterfalls in Uttara Kannada
ಉತ್ತರಕನ್ನಡದಲ್ಲಿ ಮೈದುಂಬಿ ಹರಿದ ಜಲಪಾತಗಳು

By

Published : Jul 29, 2023, 10:06 PM IST

Updated : Jul 29, 2023, 10:57 PM IST

ಮೈದುಂಬಿ ಹರಿದ ಉತ್ತರಕನ್ನಡದ ಜಲಪಾತಗಳು

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಕೊಂಚ ಕಡಿಮೆಯಾಗಿದೆ. ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಜಲಪಾತಗಳತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ, ಇತ್ತೀಚೆಗೆ ಉಡುಪಿಯ ಬೈಂದೂರಿನಲ್ಲಿ ಜಲಪಾತದಲ್ಲಿ ಪ್ರವಾಸಿಗರೊಬ್ಬರು ಜಾರಿ ಬಿದ್ದು ಮೃತಪಟ್ಟ ಬೆನ್ನಲ್ಲೇ ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮುಂಜಾಗ್ರತೆ ಕ್ರಮವಾಗಿ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಉತ್ತರಕನ್ನಡದ ಪ್ರವಾಸಿ ತಾಣಗಳು ಪ್ರವಾಸಿಗರ ಪಾಲಿಗೆ ಹಾಟ್ ಫೆವರೀಟ್​. ಅದರಲ್ಲಿಯೂ ಮಳೆಗಾಲದ ವೇಳೆ ಹಚ್ಚ ಹಸಿರಿನ ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತಗಳತ್ತ ಆಕರ್ಷಿತರಾಗುವ ಪ್ರವಾಸಿಗರೇ ಹೆಚ್ಚು.‌ ಆದರೆ ನೈಸರ್ಗಿಕ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರು ಮೈ ಮರಿಯದೇ ಜಲಪಾತಗಳನ್ನು ಕಣ್ತುಂಬಿಕೊಂಡಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಹೀಗೆ ಬಂದವರು ಮೋಜು ಮಸ್ತಿಯಲ್ಲಿ ತೊಡಗಿಕೊಂಡು ಆಪತ್ತು ತಂದುಕೊಳ್ಳುತ್ತಿದ್ದಾರೆ. ನೀರಿಗಿಳಿದು ಹುಚ್ಚಾಟದಲ್ಲಿ ತೊಡಗಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಉಡುಪಿಯ ಬೈಂದೂರಿನಲ್ಲಿ ಪ್ರವಾಸಿಗನೊಬ್ಬ ಜಲಪಾತದಲ್ಲಿ ಜಾರಿ ಬಿದ್ದು ಕೊಚ್ಚಿ ಹೋದ ಬೆನ್ನಲ್ಲೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮವಾಗಿ ಜಲಪಾತಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಪ್ರವಾಸಿಗರು ಜಲಪಾತಗಳಲ್ಲಿ ಇಳಿದು ಅಪಾಯಕ್ಕೆ ಸಿಲುಕುವುದರಿಂದ ಸದ್ಯದ ಮಟ್ಟಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.

ಇನ್ನು ಹೊನ್ನಾವರದ ಅಪ್ಸರಕೊಂಡ, ಗೋಕರ್ಣ ಸಮೀಪದ ವಿಭೂತಿ ಫಾಲ್ಸ್, ಮಾಗೋಡ್ ಫಾಲ್ಸ್, ಯಲ್ಲಾಪುರ ತಾಲೂಕು ವ್ಯಾಪ್ತಿಯ ಶಿರ್ಲೆ, ಕುಳಿಮಾಗೋಡು, ಕಾನೂರು ಸೇರಿದಂತೆ ಅನೇಕ ದಟ್ಟ‌ ಅರಣ್ಯ ಪ್ರದೇಶದೊಳಗಿನ ಜಲಪಾತಗಳ ಪ್ರವಾಸಿಗರ ಭೇಟಿಯನ್ನೂ ನಿಷೇಧಿಸಲಾಗಿದೆ. ಅಲ್ಲದೇ ಆಯಾ ಸ್ಥಳೀಯ ಆಡಳಿತಗಳಿಗೂ ನಿಗಾ ಇಡುವಂತೆ ಸೂಚಿಸಲಾಗಿದೆ.ಇದರಿಂದ ಜಲಪಾತಗಳು ಪ್ರವಾಸಿಗರಿಲ್ಲದೇ ಖಾಲಿ ಹೊಡೆಯುವಂತಾಗಿದೆ.

ಬೀಚ್ ಜಲಪಾತ ದೂರದಿಂದ ವೀಕ್ಷಿಸುವುದು ಸೂಕ್ತ :ಇನ್ನು ಜಿಲ್ಲಾಡಳಿತದ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದಾರೆ. ಇವತ್ತು ಸರ್ಕಾರ ರಜೆ ಇದೆ ಅಂಥ ಸ್ನೇಹಿತಯರೇ ಕಾರವಾರ ಬೀಚ್​ಗೆ ಬಂದಿದ್ದೇವಿ. ಯಾವುದೇ ಮಕ್ಕಳು ಆಗಿರಬಹುದು ಅಪ್ಪ ಅಮ್ಮ ಆಗಿರಬಹದು. ಮಕ್ಕಳಿಗೆ ಜಲಪಾತ ,ಬೀಚ್​ಗೆ ಹೋಗುವುದನ್ನು ನಿಯಂತ್ರಣ ಮಾಡುವುದು ಅಗತ್ಯವಿದೆ. ಮಳೆಗಾಲದಲ್ಲಿ ಯಾವುದೇ ಪ್ರವಾಸಿ ಸ್ಥಳ ಬೀಚ್ , ಜಲಪಾತ , ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಎಚ್ಚರಿಕೆಯಿಂದ ಇರಬೇಕು.

ಮೈಮರೆತು ಮೋಜು ಮಸ್ತಿಯಲ್ಲಿ ತೊಡಗಿಕೊಂಡಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ತಂದೆ ತಾಯಿಗಳು ನೋವು ಅನುಭವಿಸಬೇಕಾಗುತ್ತದೆ. ಪ್ರವಾಸಿ ತಾಣಗಳನ್ನು ದೂರದಿಂದ ನೋಡಿ ಸವಿಯಬೇಕು. ನಾವು ಕೂಡ ಇದೀಗ ಬೀಚ್ ಗಳಿಗೆ ಬಂದು ದೂರದಿಂದಲೇ ನೋಡುತ್ತಿದ್ದೇವೆ ಎಂದು ಕಾರವಾರದ ಶಾಂತಾ ವಿನೋದಕುಮಾರ್ ಅಭಿಪ್ರಾಯ ತಿಳಿಸಿದರು.

ಒಟ್ಟಾರೆ ಜಿಲ್ಲೆಯಲ್ಲಿ ಜಲಪಾತಗಳು ಮೈದುಂಬಿಕೊಂಡರೂ, ಮೈ ಮರೆತು ಆಪತ್ತು ತಂದುಕೊಳ್ಳುವದರಿಂದ ಪ್ರವಾಸಿಗರಿಗೆ ಇದೀಗ ನಿರ್ಬಂಧ ಹೇರಿ ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಮಳೆ ಕಡಿಮೆಯಾಗಿ ಪ್ರವಾಸಿತಾಣಗಳು ಪುನಃ ತೆರೆದುಕೊಂಡು ಪ್ರವಾಸಿಗರಿಗೆ ಸಿಗುವಂತಾಗಬೇಕಿದೆ.

ಇದನ್ನೂಓದಿ:ಕಲಬುರಗಿಯಲ್ಲಿ ಮಳೆಯಿಂದ 283 ಮನೆಗಳಿಗೆ ಭಾಗಶಃ ಹಾನಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

Last Updated : Jul 29, 2023, 10:57 PM IST

ABOUT THE AUTHOR

...view details